Bengaluru Bandh: ಬಂದ್‌ಗೆ ಅವಕಾಶವಿಲ್ಲ, ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ: ಕಮಿಷನರ್ ದಯಾನಂದ್ ಎಚ್ಚರಿಕೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ (ಸೆಪ್ಟೆಂಬರ್ 26) ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು, ನಗರದಲ್ಲಿ ಬಂದ್ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರ್ ಬಂದ್‌ಗೆ ಕರೆ ಕೊಟ್ಟಿದ್ದ ಹಿನ್ನಲೆಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಮಂಗಳವಾರ ಬಂದ್‌ಗೆ ಅವಕಾಶ ಇಲ್ಲ, ಬಂದ್ ಮಾಡಲು ಅನುಮತಿ ಕೊಡಲ್ಲ ಎಂದು ಸಂಘಟಕರಿಗೆ ಸೂಚನೆ ನೀಡಿದ್ದೇವೆ, ಯಾರಾದರೂ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸರ್ವೋಚ್ಚ ನ್ಯಾಯಾಲಯದ ಯಾವುದೇ ರೀತಿಯ ಬಂದ್‌ಗೆ ಅವಕಾಶ ಕೊಡಬಾರದು ಎಂದು ಆದೇಶ ನೀಡಿದೆ. ಒಂದು ವೇಳೆ ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ ಅದಕ್ಕೆ ಆಯೋಕರನ್ನೇ ಹೊಣೆ ಮಾಡಲಾಗುತ್ತದೆ ಎಂದು ಹೇಳಿದರು.
ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ
ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸೆ. 25ರಿಂದ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಇರಲಿದೆ ಎಂದು ಮಾಹಿತಿ ನೀಡಿದರು. 2016ರಲ್ಲಿ ನಡೆದ ಕೆಟ್ಟ ಘಟನೆಗಳು ಮತ್ತೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಇಲ್ಲ ಎಂದರು.
ತಮಿಳುನಾಡಿನ ಬಸ್‌ಗಳಿಗೆ ಭದ್ರತೆ ನೀಡುವ ಬಗ್ಗೆ ಕೂಡ ಚಿಂತನೆ ಮಾಡಲಾಗುತ್ತಿದೆ, ತಮಿಳುನಾಡು ಬಸ್‌ಗಳು ಭದ್ರತೆ ಬೇಕು ಎಂದು ಮನವಿ ಮಾಡಿದರೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ನಗರದಲ್ಲಿ ಭದ್ರತೆಗಾಗಿ 60 ಕೆಎಸ್ಆರ್ ಪಿ ಮತ್ತು 40 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.
150ಕ್ಕೂ ಹೆಚ್ಚು ಸಂಘಟೆಗಳ ಬೆಂಬಲ
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, 150 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಆಮ್ ಆದ್ಮಿ ಪಕ್ಷ, ಜನತಾದಳ ಪಕ್ಷಗಳೂ ಕೂಡ ಬಂದ್‌ಗೆ ಬೆಂಬಲ ನೀಡಿದ್ದು, ಕಾವೇರಿ ಹೋರಾಟಕ್ಕೆ ಧುಮುಕಿವೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾಗರೀಕರು ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಶಾಂತಿಯುತವಾಗಿ ಬಂದ್ ಮಾಡುವಂತೆ ಸಂಘಟನೆಗಳಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications