Bengaluru Bandh: ಬಂದ್‌ಗೆ ಭಾರಿ ಬೆಂಬಲ: ಕಾವೇರಿ ಕಿಚ್ಚಿಗೆ ಸಿಲಿಕಾನ್ ಸಿಟಿ ಸ್ತಬ್ದ
ಬೆಂಗಳೂರು, ಸೆಪ್ಟಂಬರ್ 26: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಕನ್ನಡಿಗರು ಯಶಸ್ವಿಯಾಗಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಸರ್ಕಾರದ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾಕಾರರ ಮನವಿ ಆಲಿಸಿದ್ದಾರೆ. ಇದರ ನಡುವೆ, ಕಾವೇರಿ ಪ್ರಾಧಿಕಾರ ಮತ್ತೆ ಮೂರು ಸಾವಿರ ಕ್ಯೂಸೆಕ್ಸ್ ನೀರು, ಮುಂದಿನ 18ದಿನದ ವರೆಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದ್ದು ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿದೆ.

ಕರ್ನಾಟಕ ಜಲಸಂರಕ್ಷಣಾ ಸಮಿತಿ ಕರೆಕೊಟ್ಟಿದ್ದ ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಕೊಟ್ಟಿದ್ದವು. ಮಂಗಳವಾರ ಬೆಳಗ್ಗೆಯಿಂದಲೇ ಬಂದ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ನಗರದಲ್ಲಿ ಬಹುತೇಕ ಅಂಗಡು ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಲಾಗಿತ್ತು.
100 ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ
ಇನ್ನು ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಭಾರಿ ಮೆರವಣಿಗೆ ಮಾಡಲು ಪ್ರತಿಭಟನಾಕಾರರು ಯೋಜಿಸಿದ್ದರು. ಆದರೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು. ಅಲ್ಲದೆ ಮೈಸೂರು ಸರ್ಕಲ್‌ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರ ಬಂಧನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಬೆಂಗಳೂರು ಮಾತ್ರವಲ್ಲದೆ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕೂಡ ಪ್ರತಿಭಟನೆ ಮಾಡಲಾಗಿದೆ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ, ರಾಜ್ಯ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿವೆ.
ಖಾಸಗಿ ವಾಹನಗಳ ಓಡಾಟ ನಗರದಲ್ಲಿ ಬಹುತೇಕ ಬಂದ್ ಆಗಿತ್ತು, ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಇದ್ದರೂ ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ನಗರದ ಬಹುತೇಕ ಖಾಸಗಿ ಕಂಪನಿಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದ್ದವು.
ಟ್ವಿಟರ್ ಅಭಿಯಾನ
ಹಲವು ಸಂಘಟನೆಗಳು, ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿದರೆ. ನಾಗರಿಕರು ಕೂಡ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿದ್ದವು. ಕಾವೇರಿ ನಮ್ಮದು ಹ್ಯಾಷ್‌ಟ್ಯಾಗ್‌ನೊಂದಿಗೆ ನಡೆದ ಅಭಿಯಾನದಲ್ಲಿ 1.3 ಲಕ್ಷ ಮಂದಿ ಟ್ವೀಟ್ ಮಾಡುವ ಮೂಲಕ ಬೆಂಬಲಿಸಿದ್ದಾರೆ.
ಬೆಂಗಳೂರು ಬಂದ್ ಯಶಸ್ವಿಯಾಗಿದ್ದು, ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇಂದು ಮತ್ತೆ ತಮಿಳುನಾಡಿಗೆ ನೀರು ಹರಿಸಲು ಪ್ರಾಧಿಕಾರ ಸೂಚನೆ ನೀಡಿರುವುದರಿಂದ ಶುಕ್ರವಾರ ಬಂದ್ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಇನ್ನು ಶುಕ್ರವಾರದ ಬಂದ್‌ಗೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆ ಮಾಡಲಿ, ಆದರೆ ಬಲವಂತವಾಗಿ ಬಂದ್ ಮಾಡಿದರೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಸಂಘಕರನ್ನು ಹೊಣೆ ಮಾಡಲಾಗುವುದು ಎಂದು ಹೇಳಿದರು.












Click it and Unblock the Notifications