ಬೆಂಗಳೂರು ಬಂದ್: ನಮ್ಮ ಮೆಟ್ರೋ, ಓಲಾ, ಉಬರ್ ಸೇವೆ ಲಭ್ಯ- ಮಾಹಿತಿ, ವಿವರ
ಬೆಂಗಳೂರು, ಸೆಪ್ಟೆಂಬರ್ 26: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಆದರೆ, ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ಸಾರಿಗೆ ಸೇವೆಗಳು ಲಭ್ಯವಿದೆ. ಸಂಘಟನೆಗಳು ಬಂದ್‌ಗೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಸಾರ್ವಜನಿಕರಿಗೆ ಎಲ್ಲಾ ಸೇವೆಗಳನ್ನೂ ಒದಗಿಸಲಾಗುತ್ತಿದೆ.
ಬಿಎಂಟಿಸಿ ಬಸ್‌ಗಳು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎಲ್ಲಾ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ನಗರ ಸಾರಿಗೆ ಸಂಸ್ಥೆಯು ಎಕ್ಸ್‌ನಲ್ಲಿ ಪ್ರಕಟಿಸಿದೆ. ಆದಾಗ್ಯೂ, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಕಂಡುಬಂದಿಲ್ಲ. ಕೆಲವೇ ಪ್ರಯಾಣಿಕರನ್ನು ಹೊಂದಿರುವ ಬಸ್ಸುಗಳು ಸಂಚರಿಸುತ್ತಿರುವ ಬಗ್ಗೆ ವರದಿಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್ ಬೆಂಗಳೂರು ಬಂದ್‌ಗೆ ಬೆಂಬಲ ನೀಡಿದೆ.

ನಮ್ಮ ಮೆಟ್ರೋ: ನಗರದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯವಿದೆ. ಬೆಂಗಳೂರಿನ ನಮ್ಮ ಮೆಟ್ರೋದ ಯಾವುದೇ ಮಾರ್ಗದಲ್ಲಿ ಯಾವುದೇ ಅಡಚಣೆಗಳಿಲ್ಲ.
ಓಲಾ / ಉಬರ್ ಕ್ಯಾಬ್ ಸೇವೆಗಳು: ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘವು ಬಂದ್‌ಗೆ ಬೆಂಬಲವನ್ನು ಹಿಂಪಡೆದ ನಂತರ ನಗರದಾದ್ಯಂತ ಟ್ಯಾಕ್ಸಿ ಸೇವೆಗಳು ಲಭ್ಯವಿರುತ್ತವೆ. ಈ ಮಾತನಾಡಿರುವ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, 'ಶುಕ್ರವಾರ ರಾಜ್ಯಾದ್ಯಂತ ನಡೆಯುವ ಬಂದ್‌ಗೆ ಸಂಘಟನೆ ಬೆಂಬಲ ನೀಡಲಿದೆ. ರಾಜ್ಯಾದ್ಯಂತ ನಡೆಯಲಿರುವ ಬಂದ್‌ನಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ. ಎರಡು ದಿನವೂ ಭಾಗವಹಿಸಲು ಸಾಧ್ಯವಾಗದ ಕಾರಣ ಬೆಂಗಳೂರು ಬಂದ್‌ನಿಂದ ಹಿಂದೆ ಸರಿದಿದ್ದೇವೆ' ಎಂದು ಹೇಳಿದ್ದಾರೆ.

ಆಟೋ ಸೇವೆಗಳು: ಆಟೋ ಚಾಲಕರು ಮುಷ್ಕರವನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಸಾಮಾನ್ಯಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಒಬ್ಬ ಪ್ರಯಾಣಿಕರಿಗೆ 12 ಕಿಲೋಮೀಟರ್‌ಗಳಿಗೆ 300-500 ರೂಪಾಯಿಗಳನ್ನು ನೀಡುವಂತೆ ಕೇಳಲಾಗಿದೆ ಎಂದು 'ಎಎನ್‌ಐ' ವರದಿ ಮಾಡಿದೆ.
'ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ನಮ್ಮ ಬೆಂಬಲವಿದೆ. ಕಾವೇರಿ ನದಿ ನೀರಿನ ಸಮಸ್ಯೆ ಬಂದಾಗ, ನಮ್ಮದು ನಿಲುವು ಸ್ಪಷ್ಟವಾಗಿದೆ. ಇಂದು ಆಟೋಗಳು ಓಡುವುದಿಲ್ಲ. ನಾವು ಬಂದ್ ಅನ್ನು ಬೆಂಬಲಿಸುತ್ತೇವೆ' ಎಂದು ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ ಆಟೋ ಚಾಲಕ ನಸೀರ್ ಖಾನ್ ಹೇಳಿದರು.
ಅಂತರರಾಜ್ಯ ವಿಮಾನಗಳು: ಬೆಂಗಳೂರು ಬಂದ್ ಬಿಸಿ ಅಂತರರಾಜ್ಯ ವಿಮಾನಗಳಿಗೆ ತಟ್ಟಿದೆ. ಪ್ರಯಾಣಿಕರಿಲ್ಲದ ಕಾರಣ ಸುಮಾರು 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ.












Click it and Unblock the Notifications