Auto Ban: ಆಟೋ ಚಾಲಕರಿಂದ ಪ್ರಯಾಣಿಕರ ಸುಲಿಗೆ!: ರಾಪಿಡೋ, ಟ್ಯಾಕ್ಸಿಯಂತೆ ಅಟೋರಿಕ್ಷಾ ಬ್ಯಾನ್..?
ಬೆಂಗಳೂರು, ಜೂನ್ 21: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಆಟೋ ಚಾಲಕರು ಪ್ರಯಾಣಿಕರ ಮಧ್ಯೆ ಬಾಡಿಗೆ ಹೊಂದಿಸುವಲ್ಲಿ ಮಾತಿನ ಚಕಮಕಿ, ಜಗಳ ಘಟನೆಗಳು ಹೆಚ್ಚಾಗಿದ್ದು ಕಂಡು ಬಂದಿದೆ. ಕೆಲವು ಆಟೋ ಚಾಲಕರು ಸದ್ಯದ ಪರಿಸ್ಥಿತಿ ನೋಡಿಕೊಂಡು ದುಪಟ್ಟು ಹಣ ವಸೂಲಿಗೆ ಮುಂದಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ವಾಗ್ಯುದ್ದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೆಲ್ಲ ನೋಡಿದರೆ ಆಟೋಗಳು ಬ್ಯಾನ್ ಆಗುತ್ತಾ? ಎಂಬ ಅನುಮಾನ ಶುರುವಾಗಿದೆ. ಕೆಲವರಂತೂ ಆಟೋ ಬ್ಯಾನ್ ಮಾಡಿಬಿಡಿ ಎಂದು ಒತ್ತಾಯಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು...?
ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಪಿಡೋ ಬೈಕ್ ಹಾಗೂ ಒಲಾ, ಊಬರ್ ಟ್ಯಾಕ್ಸಿ ಸೇವೆಗಳನ್ನು ರದ್ದು ಮಾಡಿ ಆದೇಶಿಸಿದೆ. ಸರ್ಕಾರ ಈ ರಾಪಿಡೋ, ಒಲಾ, ಊಬರ್ ಟ್ಯಾಕ್ಸಿ ಸೇವೆಗಳಿಗೆ ನಿಯಮ ರೂಪಿಸುವುದಿಲ್ಲ ಎಂದು ಹೇಳಿದೆ. ಅದಕ್ಕೆಂದೆ ಸಮಯ ನೀಡಿ ಜೂನ್ 15ರವರೆಗೆ ಸೇವೆ ಅವಕಾಶ ನೀಡಲಾಗಿತ್ತು. ಸರ್ಕಾರದ ಸ್ಪಷ್ಟ ನಿರ್ಧಾರದ ಬಳಿಕ ಜೂಣ್ 16ರಿಂದ ರಾಪಿಡೋ ಬೈಕ್, ಊಬರ್ ಟ್ಯಾಕ್ಸಿ ಸೇವೆಗಳನ್ನು ರದ್ದು ಮಾಡಲಾಗಿದೆ.

ಈ ನಿಷೇಧ ಆದೇಶ ಬಳಿಕ ಸಾರ್ವಜನಿಕರು ಆಟೋ, ಬಸ್ ಇತರ ಸಾರಿಗೆ ಅವಲಂಬಿಸಬೇಕಾಯಿತು. ಇದೇ ಸಮಯದ ದುರಪಯೋಪಕ್ಕೆ ಮುಂದಾದ ಕೆಲವು ಆಟೋ ಚಾಲಕರು ಮನ ಬಂದಂತೆ ನಿಗದಿತ ಚಾರ್ಜ್‌ಗಿಂತಲೂ ಮೂರು ಪಟ್ಟು ಹೆಚ್ಚು ಹಣ ಕಿಳುತ್ತಿದ್ದಾರೆ. ಈ ಕುರಿತು ವಿಡಿಯೋಗಳು ವೈರಲ್ ಆಗಿವೆ.
ಹೌದು, ಜೆಪಿನಗರದಿಂದ ಕೊಂಚ ದೂರದವರೆಗೆ ಹೋಗಲು ಮೀಟರ್ ಹಾಕದೇ 400 ರೂಪಾಯಿ ಕೇಳುವ ಆಟೋ ಚಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಮೀಟರ್ ಹಾಕಿ 450 ರೂ. ಆದ್ರು ಕೊಡ್ತಿನಿ ಎನ್ನುತ್ತಾರೆ ಪ್ರಯಾಣಿಕ. ಆದರೂ ಇಲ್ಲ ಬರಲ್ಲ. ನಾನು ಮೀಟರ್ ಹಾಕಲ್ಲ. ಇಷ್ಟ ಇದ್ರೆ ಬಾ..ಇಲ್ಲಾ ಬೇರೆ ಗಾಡಿ ಕೇಳು ಎಂದು ಚಾಲಕ ದುರ್ವತನೆ ಪ್ರದರ್ಶಿಸಿದ್ದಾರೆ.
ತಿಂಗಳಿಗೆ 24,000 ರೂ.ಆಟೋಗೆ ಖರ್ಚಾಗುತ್ತೆ!
ಒಂದು ಬದಿಗೆ 400 ರೂಪಾಯಿ ಆದ್ರೆ ಎರಡು ಬದಿ ಸಂಚಾರಕ್ಕೆ 800 ರೂಪಾಯಿ (800x30) ಅಂದರೂ ಮಾಸಿಕವಾಗಿ 24000 ರೂಪಾಯಿ ಆಗುತ್ತದೆ. ಬೆಂಗಳೂರಲ್ಲಿ ನಾವು ದುಡಿಯುವುದೇ 20000 ರೂಪಾಯಿ, ಅದರಲ್ಲಿ 24 ಸಾವಿರ ಆಟೋಗೆ ಖರ್ಚಾದರ ಬದುಕೆ ಹೇಗೆ ನಡೆಯುತ್ತದೆ ಎಂದು ನೆಟ್ಟಿಗರು ಆಟೋ ರೀಕ್ಷಾದವರ ನಡೆ ಖಂಡಿಸಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ನಮ್ಮ ಮೆಟ್ರೋ ನಿಲ್ದಾಣದಿಂದ ಗಮ್ಯ ಸ್ಥಳಕ್ಕೆ ಬರಲು 100 ರೂಪಾಯಿ ಕೇಳುವ ಆಟೋ ಚಾಲಕನ ವಿಡಿಯೋ ವೈರಲ್ ಆಗಿದೆ. ಮೀಟರ್ ಹಾಕದೆಯೇ 100 ರೂಪಾಯಿ ಕೇಳುತ್ತಾರೆ. ಮೀಟರ್ ಇಲ್ಲದೇ ರಸ್ತೆಗೆ ಯಾಕೆ ಸಂಚರಿಸುತ್ತೀರಿ? ಮೀಟರ್ ಹಾಕಬೇಕಲ್ಲವೇ. ನೂರು ರೂಪಾಯಿ ಕೊಟ್ಟರೆ ಮೀಟರ್ ಸರಿ ಹೋಗುತ್ತಾ ಎಂದು ಪ್ರಯಾಣಿಕ ಗದರುತ್ತಾರೆ. ಮಳೆ ನೀರಿಗೆ ಮೀಟರ್ ಕೆಟ್ಟು ಹೋಗಿದೆ ಎಂದು ಚಾಲಕ ಸಬೂಬು ಹೇಳುತ್ತಾನೆ. ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನಂಪ್ರತಿ ನಡೆಯುತ್ತಿವೆ. ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ. ಕೆಲವು ಅನಿವಾರ್ಯ ಎಂದು ಕೇಳಿದಷ್ಟು ಹಣ ನೀಡಿ ಹೋಗುತ್ತಿದ್ದಾರೆ.

ಆವಾಜ್ ಹಾಕಿದ ಆಟೋ ಚಾಲಕ: ಜನಾಕ್ರೋಶ
ಇನ್ನೊಂದು ಪ್ರಕರಣದಲ್ಲಿ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಗೆ ನಿಂದಿಸಿದ ಘಟನೆ ನಡೆದಿದೆ. ನಾನು ಕೇಳಿದಷ್ಟು ಹಣ ಕೊಡು ಇಲ್ಲ ಆಟೋ ಬಿಟ್ಟು ಕೆಳಗಿಳಿ ಎಂದು ಗದರಿಸಿದ್ದಾನೆ. ನಾನು 80 ರೂಪಾಯಿ ಕೇಳಿದೆ. ಏನಿವಾಗ? ನನ್ನಿಷ್ಟಕ್ಕೆ ಇರೋದು ಆಟೋ. 100 ಅಲ್ಲ 500 ರೂ. ಕೊಟ್ರೋ ಹೋಗಲ್ಲ. ಏನ್ ಮಾಡ್ತಿಯಾ? ಎಂದು ಆಟೋ ಚಾಲಕನೊಬ್ಬ ಬಾಡಿಗೆ ಕೇಳಿದ ಪ್ರಯಾಣಿಕನಿಗೆ ಆವಾಜ್ ಹಾಕಿದ ವಿಡಿಯೋ ಹರಿದಾಡುತ್ತಿದೆ.
ರೌಡಿಗಳಂತೆ ವರ್ತಿಸುವ ಆಟೋ ಚಾಲಕರು?
ಇದೇ ಕಾರಣಕ್ಕೆ ಜನರು ರಾಪಿಡೋ, ಟ್ಯಾಕ್ಸಿ ಮೊರೆ ಹೊಗುತ್ತಿದ್ದರು. 90ರಷ್ಟು ಆಟೋಗಳ ಚಾಲಕರು ರೌಡಿಗಳಂತೆ ದರ್ಪ ತೋರುತ್ತಾರೆ. ಸೌಜನ್ಯಯುತವಾಗಿ ವರ್ತಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮಂಥವರಿಂದಲೇ ಅದೆಷ್ಟೋ ಒಳ್ಳೆಯ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಾಮೆಂಟ್ ಹಾಕಿದ್ದಾರೆ. ಆವಾಜ್ ಹಾಕಿ ಆಟೋ ಚಾಲಕನ ನಡೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಇದೇ ಕಾರಣದಿಂದ ಆಟೋದವರನ್ನು ಬ್ಯಾನ್ ಮಾಡಬೇಕು. ರಾಪಿಡೋದವರನ್ನು ನಿಷೇಧಿಸಿದಂತೆ ಇವರನ್ನು ನಿಷೇಧಿಸಬೇಕು. ಅಂದಾಗ ಇವರಿಗೆ ಪ್ರಯಾಣಿಕರ ನೋವು ಎಂದು ಗೊತ್ತಾಗುತ್ತದೆ ಎಂದು ಕೆಲವು ಆಗ್ರಹಿಸಿದ್ದಾರೆ.
ಸರ್ಕಾರದ ನಡೆ ಏನು?
ಮತ್ತೆ ಕೆಲವರು ಆಟೋ ಚಾಲಕ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಆಟೋ ಚಾಲಕರ ಮಧ್ಯದ ಮಾತಿನ ಚಕಮಕಿ ವಿಡಿಯೋ ಮಾಡದಂತೆ ಬೈದಿದ್ದಾರೆ. ಆಟೋ ಚಾಲಕ ಪರ ಮಾತನಾಡಿದ್ದಾರೆ. ಹಿಂದಿನಿಂದಲೇ ಆಟೋ ಚಾಲಕರು ಪ್ರಯಾಣ ದರ ಹೆಚ್ಚಳಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದೀಗ ಸಂದರ್ಭದಲ್ಲಿ ಲಾಭ ಪಡೆಯುತ್ತಿರುವ ಕೆಲವು ಆಟೋ ಚಾಲಕರು ಮನ ಬಂದಂತೆ ಹಣ ಕೀಳು ಮುಂದಾಗಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುತ್ತಾ? ಇಲ್ಲವೇ ಬ್ಯಾನ್ ಎಚ್ಚರಿಕೆ ನೀಡುತ್ತಾ ಎಂದು ಕಾದು ನೋಡಬೇಕಿದೆ.












Click it and Unblock the Notifications