Appe Midi Fair : ಬೆಂಗಳೂರು: ಮೊದಲ ಬಾರಿಗೆ ಏ.12-13ರಂದು ಉಪ್ಪಿನಕಾಯಿಗೆ ಹೆಸರಾದ ಅಪ್ಪೆಮಿಡಿ ಮೇಳ, ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 09: ಉಪ್ಪಿನಕಾಯಿ ಎಂದರೆ ಯಾರಿಗೆತಾನೇ ಇಷ್ಟವಿರುವುದಿಲ್ಲ ಹೇಳಿ. ಉಪ್ಪಿನಕಾಯಿ ಇಲ್ಲದೇ ಊಟ ಮಾಡದವರೂ ಇದ್ದಾರೆ. ನಾನಾ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಿಟ್ಟು ವರ್ಷವಿಡಿ ಬಳಕೆ ಮಾಡಲಾಗುತ್ತದೆ. ಆ ಪೈಕಿ ಸಾಕಷ್ಟು ಮನೆಗಳ ಊಟದಲ್ಲಿ ತನ್ನದೇ ಆದ ಸ್ಥಾನ ಪಡೆದ 'ಅಪ್ಪೆಮಿಡಿ' ಮೇಳ ನಡೆಯಲಿದೆ.
ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಮಲೆನಾಡಿನಲ್ಲಿ ಹಲವೆಡೆ 'ಅಪ್ಪೆಮಿಡಿ' ಗಳನ್ನು (ಮಾವಿನ ಕಾಯಿಯ ತಳಿ) ಉಪ್ಪಿನಕಾಯಿ ಬಳಸುತ್ತಾರೆ. ಈ 'ಅಪ್ಪೆಮಿಡಿ'ಗಳಲ್ಲಿ ನೂರಾರು ತಳಿಗಳು ಇವೆ. ಅವುಗಳನ್ನು ನಾಡಿನ ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸಲು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (IIHR)ಮುಂದಾಗಿದೆ.

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಇದೇ ಪ್ರಥಮ ಬಾರಿಗೆ 'ಅಪ್ಪೆಮಿಡಿ' ಮೇಳವನ್ನು ಇದೇ ಏಪ್ರಿಲ್ 12 ಮತ್ತು 13ರಂದು ಹಮ್ಮಿಕೊಂಡಿದೆ. ಈ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಭಾಗದ ಜನರಿಗೆ, ಉಪ್ಪಿನಕಾಯಿ ಪ್ರಿಯರಿಗೆ ಹಾಗೂ ರೈತರಿಗೆ ಎಲ್ಲ ಬಗೆಯ ಅಪ್ಪೆಮಿಡಿ ತಳಿಗಳನ್ನು ಪರಿಚಯಿಸಲಿದೆ.
ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸಿಗಳು ಸಹ ಈ ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಮೇಳಕ್ಕೆ ತೆರಳು ಮೂಲಕ 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಕಣ್ತುಂಬಿಕೊಳ್ಳಬಹುದು.
ಅಪ್ಪೆಮಿಡಿ ಎಂಬುದು ಕರ್ನಾಟಕ ರಾಜ್ಯದ ಸಾಂಪ್ರದಾಯಿಕ ಉಪ್ಪಿನಕಾಯಿ ತಳಿ ಆಗಿದೆ. ಇದು ಸಹ ಮಾವಿನಕಾಯಿಯಂತೆ ಋತುವಿನಲ್ಲಿ ಬಳಕೆ ಮಾಡಬಹುದಾಗಿದೆ. ಈ ಅಪ್ಪೆಮಿಡಿ ತಳಿಗೆ ಜಿಐ ಮಾನ್ಯತೆ ದೊರೆತಿದೆ. ಕರ್ನಾಟಕದಲ್ಲಿ ಮಲೆನಾಡು ಮತ್ತಿತರ ಪ್ರದೇಶಗಳಲ್ಲಿ ಅಪ್ಪೆಮಿಡಿ ತಳಿಗಳನ್ನು ಕಾಣಬಹುದಾಗಿದೆ. ಆ ಭಾಗದ ಬಹುತೇಕ ಮನಗಳಲ್ಲಿ ಮಾವಿನಕಾಯಿಯ ಸೀಸನ್ ನಲ್ಲಿ ಈ ತಳಿಯ ಉಪ್ಪಿನಕಾಯಿ ಬಳಕೆಯಲ್ಲಿರುತ್ತದೆ.

ಅಪ್ಪೆಮಿಡಿಯಲ್ಲಿ 250ಕ್ಕೂ ಹೆಚ್ಚು ತಳಿ
ಈ ಅಪ್ಪೆಮಿಡಿಯಲ್ಲಿ ಅಂದಾಜು 250ಕ್ಕೂ ಹೆಚ್ಚು ತಳಿಗಳಿವೆ. ಈ ಪೈಕಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ (IIHR) 100 ಅಪ್ಪೆಮಿಡಿ ತಳಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲು ಸಜ್ಜಾಗಿದೆ. ಈ ಬೃಹತ್ ಮೇಳದಲ್ಲಿ ಎಂಟಿಆರ್, ಪ್ರಿಯಾ ಹಾಗೂ ಇನ್ನಿತರ ಉಪ್ಪಿನಕಾಯಿ ಸಂಸ್ಥೆಗಳು ಇಲ್ಲಿ ಮಳಿಗೆಗಳನ್ನು ತೆರೆಯಲಿವೆ.
ಅಷ್ಟೇ ಅಲ್ಲದೇ ವಿವಿಧ ಉಪ್ಪಿನಕಾಯಿ ಸಂಸ್ಥೆಗಳು ತಾವು ತಯಾರಿಸಿದ ತರಹೇವಾರಿ ತಳಿಗಳ ಉಪ್ಪಿನಕಾಯಿ ಪ್ರದರ್ಶನ ಹಾಗೂ ಖರೀದಿಗೆ ಇಲ್ಲಿ ಅವಕಾಶ ಇದೆ. ರೈತರು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಐಐಎಚ್‌ಆರ್ ನಿರ್ದೇಶಕ ಸಂಜಯ್‌ಕುಮಾರ್ ಸಿಂಗ್ ಹೇಳಿದ್ದಾರೆ.
ತಳಿಯ ವೈಶಿಷ್ಟತೆ ಏನು?
ಈ ಅಪ್ಪೆಮಿಡಿ ತಳಿಯಲ್ಲಿ ಸಾಕಷ್ಟು ವಿಧದಗಳಿಗೆ. ಬಹುತೇಕ ಎಲ್ಲವುಗಳು ತಮ್ಮದೇ ವಿನ್ಯಾಸ, ರುಚಿ ಮತ್ತು ಸುಹಾಸಣೆ ಹೊಂದಿವೆ. ಇದರಿಂದ ತಯಾರಿಸುವ ಉಪ್ಪಿನಕಾಯಿಯು ಸಾಕಷ್ಟು ದಿನಗಳ ಕಾಲ ತಾಜಾ ಆಗಿರುತ್ತದೆ. ಬಹುದಿನಗಳ ವರೆಗೆ ರುಚಿಯನ್ನು ಕಳ್ಳೆದುಕೊಳ್ಳದೇ ಇರುವ ಶಕ್ತಿ ಇದಕ್ಕಿದೆ. ಈ ಮಾವಿನ ಕಾಯಿಗಳನ್ನು ಇಡಿಯಾಗಿ ಬಳಸಲಾಗುತ್ತದೆ. ಈ ಅಪ್ಪಮಿಡಿ ತಳಿ ವಾರ್ಷಿಕವಾಗಿ 4ರಿಂದ 5 ಸಾವಿರ ಟನ್ ನಷ್ಟು ಉಪ್ಪಿನಕಾಯಿಗೆ ಬಳಕೆ ಆಗುತ್ತದೆ. ಕೇವಲ ನೂರಕ್ಕೆ ಹತ್ತರಷ್ಟು ಮಾತ್ರವೇ ಇದಕ್ಕೆ ಬೇಡಿಕೆ ಇದೆ ಎಂದು ತಿಳಿದು ಬಂದಿದೆ.
ಮಾವು ಬೆಳೆಯುವ ರೈತರಿಗೆ ಅಪ್ಪೆಮಿಡಿಯ ಮಾಹಿತಿ
ವಾರ್ಷಿಕ ಬೆಳೆಯಾಗಿರುವ ಅಪ್ಪೆಮಿಡಿ ಮಾವನ್ನು ರೈತರು ಬೆಳೆದರೆ, ವಿದೇಶಗಳಿಗೂ ಪೂರೈಕೆ ಮಾಡಬಹುದು. ಅಲ್ಲಿ ಸಹ ಈ ಮಾವಿಗೆ ಬೇಡಿಕೆ ಇದೆ. ಹೆಚ್ಚು ಆದಾಯವನ್ನು ಗಳಿಸಬಹುದು. ಒಂದು ಬಾರಿ ಎಕರೆವಾರು ಪ್ರದೇಶದಲ್ಲಿ ಮಾವು ಸಸಿಗಳನ್ನು ನಾಟಿ ಮಾಡಿದರೆ, ಸುಮಾರು 30 ರಿಂದ 40 ವರ್ಷಗಳ ಕಾಲ ಪ್ರತಿ ವರ್ಷ ಫಸಲು ಪಡೆಯಬಹುದು. ಮಾವಿನ ಸೀಸನ್‌ನಲ್ಲಿ ರೋಗ ಸಮಸ್ಯೆ ತಡೆಗೆ ನಿರ್ವಹಣೆಗೆ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ.
ಅವಧಿಗೂ ಮುನ್ನವೇ ಬರುವ ಈ ಅಪ್ಪೆಮಿಡಿ ಗಾತ್ರದಲ್ಲಿ ಚಿಕ್ಕದಿರುತ್ತದೆ. ಹೀಗಾಗಿ ಮಳೆ, ಗಾಳಿಗೆ ಉದುರಿ ಬೀಳವುದಿಲ್ಲ. ಕೊಯ್ಲಿನವರೆಗೂ ರೋಗಗಳಿಗೆ ಸಿಲುಕುವುದಿಲ್ಲ. ಖರ್ಚು ಕೂಡ ಕಡಿಮೆ ಎಂದು ಐಐಎಚ್‌ಆರ್ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications