Water Crisis: ಪಂಚಸೂತ್ರ ಜಾರಿ, ಗ್ರೀನ್‌ಸ್ಟಾರ್ ಚಾಲೆಂಜ್ ಸ್ವೀಕರಿಸಿದ ಅಪಾರ್ಟ್‌ಮೆಂಟ್ ಫೆಡರೇಷನ್: BWSSB
ಬೆಂಗಳೂರು, ಮಾರ್ಚ್ 24: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಇದರ ನರ್ವಹಣೆಗೆ ಜಲಮಂಡಳಿ ಅಧಿಕಾರಿಗಳು ಪೇಚಾಡುತ್ತಿದ್ದಾರೆ. ಜನರಿಗೆ ನೀರಿನ ಉಳಿತಾಯ, ಮಿತವ್ಯಯ ಬಗ್ಗೆ ಅರಿವು ಮೂಡಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ಗ್ರೀನ್ ಸ್ಟಾರ್ ಚಾಲೆಂಜ್ ಗೆ ಸ್ವೀಕರಿಸಿದೆ. ಏನಿದು? ನೀರಿನ ಉಳಿತಾಯದ ಪಂಚಸೂತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೀರು ಉಳಿತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಅವರು, ನೀರು ಉಳಿತಾಯ ಮತ್ತು ನೀರಿನ ಸಮರ್ಪಕ ಬಳಕೆಯ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್‌ನಲ್ಲಿ 30 ಕ್ಲಸ್ಟರ್ ಗಳಿದ್ದು ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ. ಈ ಅಪಾರ್ಟ್‌ಮೆಂಟ್ ಗಳು ಕಾವೇರಿ ನೀರು, ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಗಳ ಮೇಲೆ ಅವಲಂಬಿತವಾಗಿವೆ.
ಅಪಾರ್ಟ್ಮೆಂಟ್‌ಗಳಲ್ಲಿ ಪಂಚಸೂತ್ರ ಅಳವಡಿಕೆ
ಈ ಅಪಾರ್ಟ್ಮೆಂಟ್‌ಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಿತವಾದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಲಮಂಡಳಿ ಗ್ರೀನ್ ಸ್ಟಾರ್ ರೇಟಿಂಗ್ ಚಾಲೆಂಜ್ ಪ್ರಾರಂಭಿಸಿದೆ. ಜೊತೆಗೆ ಪಂಚ ಸೂತ್ರಗಳನ್ನು ಅಪಾರ್ಟ್ಮೆಂಟ್‌ಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದರು.
ಪಂಚಸೂತ್ರಗಳು ಯಾವುವು?
ಪಂಚಸೂತ್ರಗಳು ಎಂದರೆ, ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಯ ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ತಮ್ಮ ಸದಸ್ಯರ ಜೊತೆ ಈ ಎಲ್ಲಾ ಕ್ರಮಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುದು.

ಈ ಪಂಚಸೂತ್ರಗಳು ಅಳವಡಿಕೆಯಿಂದ ಶೇಕಡಾ 30ರಷ್ಟು ನೀರಿನ ಬಳಕೆ ಕಡಿಮೆ ಬಹುದಾಗಿದೆ. ಅನಗತ್ಯವಾಗಿ ಪೋಲಾಗುತ್ತಿರುವ ನೀರನ್ನು ತಪ್ಪಿಸಬಹುದು. ಜನರು ನೀರಿನ ಬಳಕೆಯನ್ನು ಕಡಿಮೆ ಮಾಡುವ ಜೊತೆಯಲ್ಲೇ, ಅನಗತ್ಯವಾಗಿ ಪೋಲಾಗುತ್ತಿದ್ದ ನೀರನ್ನು ತಪ್ಪಿಸಬೇಕಿರುವುದು ಇಂದಿನ ಸನ್ನಿವೇಶಗಳಲ್ಲಿ ಅತ್ಯಗತ್ಯವಾಗಿದೆ.
ಶೇ.30 ನೀರು ಉಳಿತಾಯ ಸಾಧ್ಯ
ಒಬ್ಬ ಮನುಷ್ಯನ ದಿನನಿತ್ಯದ ಬಳಕೆಗೆ ಸುಮಾರು 120 ರಿಂದ 150 ಲೀಟರ್ ಗಳಷ್ಟು ನೀರು ಸಾಕಾಗುತ್ತದೆ. ಇದರಲ್ಲಿ ಶೇಕಡಾ 20 ರಷ್ಟು ಸಂಸ್ಕರಿಸಿದ ನೀರು ಬಳಕೆ ಮಾಡುವುದರಿಂದ ಶೇಕಡಾ 30 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಆದರೆ ಕೆಲವೆಡೆ ನೀರಿನ ಲಭ್ಯತೆ ಇರುವುದನ್ನು ಕಂಡು ಜನರು ಅನಗತ್ಯವಾಗಿ ದಿನನಿತ್ಯದ ಕೆಲಸಗಳಿಗೆ ಹೆಚ್ಚಿನ ನೀರನ್ನ ಬಳಸಿಕೊಳ್ಳುತ್ತಿದ್ದಾರೆ.
ಇಂತಹ ಅಪವ್ಯಯದ ಸ್ವಭಾವವನ್ನ ಬದಲಿಸುವುದು ಹಾಗೂ ಉತ್ತಮ ನೀರಿನ ಮಿತ ಬಳಕೆ ಉತ್ತಮ ಹವ್ಯಾಸವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ತಿಳಿಸಿದರು.
ಇಂದಿನ ಜಲಕ್ಷಾಮದ ವಿರುದ್ಧ ಹೋರಾಡಲು ಜಲಮಂಡಳಿಯೊಂದಿಗೆ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಕೈಜೋಡಿಸಿದೆ. ಅಂತರ್ಜಲ ಕುಸಿತ ಆಗಿರುವುದರಿಂದ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇದನ್ನ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಈಗಾಗಲೇ ಜಲ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.












Click it and Unblock the Notifications