ಸಮಯಕ್ಕೆ ಸರಿಯಾಗಿ ವಿಮಾನ ಸೇವೆ ನೀಡುವಲ್ಲಿ ವಿಶ್ವದಲ್ಲೇ ಬೆಂಗಳೂರು, ಹೈದರಾಬಾದ್ ಬೆಸ್ಟ್
ಬೆಂಗಳೂರು, ಡಿ. 28: ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ತಾವು ಪ್ರಯಾಣಿಸುವ ರಸ್ತೆ, ವಾಯು, ಜಲ ಮಾರ್ಗಗಳ ಸೇವೆಗಳು ಸಿಕ್ಕರೆ ಸಾಕು. ಇದು ಎಷ್ಟೋ ನೆಮ್ಮದಿ ನೀಡುತ್ತದೆ. ಅದರಲ್ಲೂ ವಿಮಾನಯಾನ ಸೇವೆ ಬಗ್ಗೆ ಹೇಳುವಂತೆಯೇ ಇಲ್ಲ. ಅದೆಷ್ಟು ಬೇಗ ಹೋದರೂ, ಅದೆಷ್ಟು ನಿಧಾನಕ್ಕೆ ಹೋದರೂ ವಿಮಾನ ನಿಲ್ದಾಣದಲ್ಲಿ ಕಾಯುವುದು ತಪ್ಪುವುದಿಲ್ಲ. ಈ ಸಮಸ್ಯೆ ಕೇವಲ ಭಾರತದಲ್ಲಿ ಅಲ್ಲ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಇದೆ. ಆದರೆ, ಬೆಂಗಳೂರಿನ ಪ್ರಯಾಣಿಕರಿಗೆ ಈಗ ಸಿಹಿ ಸುದ್ದಿಯಿದೆ.
ಹೌದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2022 ರಲ್ಲಿ ವಿಶ್ವದ ಅತ್ಯಂತ ಸಕಾಲಕ್ಕೆ ವಿಮಾನ ಸೇವೆ ಒದಗಿಸುವ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದೆ.
ಸಕಾಲಕ್ಕೆ ವಿಮಾನ ಸೇವೆ ಒದಗಿಸುವ ಈ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಸೇರಿದೆ.

ವಿಮಾನಯಾನಗಳ ವಿಶ್ಲೇಷಣೆ ನಡೆಸುವ ಸಿರಿಯಮ್ ತನ್ನ ನವೆಂಬರ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸ್ಥಾನ ಪಡೆದುಕೊಂಡಿವೆ. ಬೆಂಗಳೂರು ವಿಮಾನ ನಿಲ್ದಾಣವು ದೇಶದಲ್ಲೇ ಅತ್ಯಂತ ಸಮಯಪ್ರಜ್ಞೆಯ ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದೆ.
ಕಂಪನಿಯ ವೆಬ್‌ಸೈಟ್ ಪ್ರಕಾರ , ನವೆಂಬರ್ ವರೆಗೆ 70.40 ಪ್ರತಿಶತ ಅಂತಾರಾಷ್ಟ್ರೀಯ ವಿಮಾನಗಳು ಯಾವುದೇ ವಿಳಂಬವಿಲ್ಲದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ನಿರ್ಗಮಿಸಿವೆ.
ಇನ್ನು, ಪಟ್ಟಿಯಲ್ಲಿ ನಾರ್ವೆಯ ಓಸ್ಲೋ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯಂತ ಸಮಯೋಚಿತ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ. ಇಲಲ್ಲಿ 87.63 ಪ್ರತಿಶತದಷ್ಟು ವಿಮಾನ ಸೇವೆ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆ.

ಮಿಚಿಗನ್‌ನ ಡೆಟ್ರಾಯಿಟ್ ಮೆಟ್ರೋಪಾಲಿಟನ್ ವೇಯ್ನ್ ಕೌಂಟಿ ವಿಮಾನ ನಿಲ್ದಾಣ ಮತ್ತು ಅಮೆರಿಕದ ಉತಾಹ್‌ನ ಸಾಲ್ಟ್ ಲೇಕ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಅತ್ಯಂತ ಸಮಯೋಚಿತ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 2 ಮತ್ತು 3 ನೇ ಸ್ಥಾನಗಳನ್ನು ಪಡೆದುಕೊಂಡಿವೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ 4 ನೇ ಅತ್ಯಂತ ಸಕಾಲಕ್ಕೆ ವಿಮಾನ ಸೇವೆ ಒದಗಿಸುವ ದೊಡ್ಡ ವಿಮಾನ ನಿಲ್ದಾಣವಾಗಿದೆ. ತೆಲಂಗಾಣದ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ನವೆಂಬರ್‌ವರೆಗೆ 88.44 ಪ್ರತಿಶತದಷ್ಟು ಸಮಯಕ್ಕೆ ಅಂತರಾಷ್ಟ್ರೀಯ ವಿಮಾನಗಳ ನಿರ್ಗಮನವನ್ನು ದಾಖಲಿಸಿವೆ.
ಇನ್ನು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಆರಂಭವಾಗಿದೆ..ವರದಿಗಳ ಪ್ರಕಾರ, ಇತ್ತೀಚಿನ ಟರ್ಮಿನಲ್ 2 ನಲ್ಲಿನ ಕಾರ್ಯಾಚರಣೆಗಳು ದೇಶೀಯ ವಿಮಾನ ಸೇವೆಗಳೊಂದಿಗೆ ಜನವರಿ ಮಧ್ಯದಲ್ಲಿ ಪ್ರಾರಂಭವಾಗುತ್ತವೆ. ಏಪ್ರಿಲ್ ವೇಳೆಗೆ, ಟರ್ಮಿನಲ್ ಎರಡರಲ್ಲಿ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಆರಂಭವಾಗಲಿವೆ.












Click it and Unblock the Notifications