Bengaluru Airport: ಸಿಹಿ ಸುದ್ದಿ ಕೊಟ್ಟ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಸುಧಾರಣೆ ಮಾಡಲು ಭಾರತೀಯ ರೈಲ್ವೆ ಇಲಾಖೆ ಸಜ್ಜಾಗಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಹೊಸ ರೈಲು ಸಂಪರ್ಕ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅಶ್ವಿನ್ ವೈಷ್ಣವ್ ದೊಡ್ಡಜಾಲ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೊಸ ಮಾರ್ಗವು 7.9 ಕಿ.ಮೀ ಉದ್ದವಿದ್ದು ಮೂರು ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ತಿಳಿಸಿದರು.

7.9 ಕಿ.ಮೀ ಉದ್ದದ ಈ ರೈಲು ಮಾರ್ಗದಲ್ಲಿ 6.25 ಕಿ.ಮೀ ಎಲಿವೇಟೆಡ್ ಮಾರ್ಗವಾಗಿದ್ದರೆ ಉಳಿದ 1.65 ಕಿ.ಮೀ ಭೂಗತವಾಗಿರುತ್ತದೆ ಎಂದು ಮಾಹಿತಿ ನೀಡಿದರು. ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಇದು ಸಂಪರ್ಕ ಒದಗಿಸುತ್ತದೆ. ಈ ಹೊಸ ರೈಲ್ವೆ ಯೋಜನೆ ಜೊತೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ, ಉಪನಗರ ಸೇರಿ ಒಟ್ಟು ಮೂರು ರೈಲು ಮಾರ್ಗಗಳು ಸಂಪರ್ಕ ಕಲ್ಪಿಸಲಿವೆ.
ಅಶ್ವಿನಿ ವೈಷ್ಣವ್ ಹೇಳಿದ್ದೇನು
ವಿಮಾನ ನಿಲ್ದಾಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಕಳೆದ ಬಾರಿ ನಾನು ಬೆಂಗಳೂರಿಗೆ ಬಂದಾಗ, ವಿಮಾನ ನಿಲ್ದಾಣದಿಂದ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದೆ. ಆಗಲೆ ಇಲ್ಲಿಗೆ ಸಂಪರ್ಕ ಕಲ್ಪಿಸಿದರೆ ಆಗುವ ಅನುಕೂಲದ ಬಗ್ಗೆ ತಿಳಿದುಕೊಂಡೆ. ಕೆಲವು ಕಡೆಗಳಲ್ಲಿ ನಾವು ರೈಲು ಮೇಲ್ಸೇತುವೆ ನಿರ್ಮಿಸಬೇಕಿದ್ದರಿಂದ ಹಲವು ತಾಂತ್ರಿಕ ದೋಷಗಳು ಇದ್ದವು. ಇಂದು ನನಗೆ ಪ್ಲಾನ್ ಅನ್ನು ತೋರಿಸಿದ್ದು, ಇದರಿಂದ ಪ್ರಯಾಣಿಕರ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಕೆಆರ್ ಪುರ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕೆ-ರೈಡ್, ಸಂಪಿಗೆ ಮಾರ್ಗದ (ಕೆಎಸ್ಆರ್ ಬೆಂಗಳೂರು-ಯಲಹಂಕ-ದೇವನಹಳ್ಳಿ) ಟೆಂಡರ್ ಇನ್ನೂ ಅಂತಿಮವಾಗಿಲ್ಲ.
ಸದ್ಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತಿರದ ರೈಲ್ವೆ ನಿಲ್ದಾಣ ಟರ್ಮಿನಲ್‌ನಿಂದ 3.5 ಕಿ.ಮೀ ದೂರದಲ್ಲಿದೆ. 2021ರ ಜನವರಿ 4 ರಂದು ಈ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗಿತ್ತು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ.
ಈ ರೈಲು ನಿಲ್ದಾಣದಿಂದ 28,000 ವಿಮಾನ ನಿಲ್ದಾಣದ ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಗುರಿ ಹೊಂದಿತ್ತು. ರೈಲು ವೇಳಾಪಟ್ಟಿಗೆ ಅನುಗುಣವಾಗಿ ಬಿಐಎಎಲ್ ರೈಲು ನಿಲ್ದಾಣದಿಂದ ಟರ್ಮಿನಲ್‌ಗೆ ಉಚಿತ ಬಸ್ ಸೇವೆ ಕೂಡ ಒದಗಿಸುತ್ತದೆ.
ಆದರೂ ರೈಲುಗಳು ಯಲಹಂಕ ದೇವನಹಳ್ಳಿಯ ಏಕಪಥ ಮಾರ್ಗದಲ್ಲಿ ಮಾತ್ರ ಸಂಚರಿಸುವುದರಿಂದ ಪ್ರಯಾಣಿಕರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣವು 35 ಕಿ.ಮೀ ದೂರದಲ್ಲಿದ್ದು, ಹೊಸ ಯೋಜನೆಯು ಅನುಷ್ಠಾನವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ..












Click it and Unblock the Notifications