ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕ ಸ್ನೇಹಿ ವಿಶಿಷ್ಟ ಸೌಲಭ್ಯ ಪರಿಚಯ
ಬೆಂಗಳೂರು, ಡಿಸೆಂಬರ್ 06: ವಿಶ್ವದಲ್ಲಿ ಅತೀ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವ ಮೂನರೇ ಏರ್‌ಪೋರ್ಟ್ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯ, ಉಪಕ್ರಮ ತರುತ್ತಿದೆ. ಇದೀಗ ವಿಶೇಷ ಚೇತನರಿಗೆ ಸುಲಭವಾಗಿ ವಿಮಾನ ಏರಲು ಸಹಕಾರಿಯಾಗುವಂತಹ ಸೌಕರ್ಯವನ್ನು ಭಾರತದಲ್ಲೇ ಮೊದಲ ಬಾರಿಗೆ 'ಮೊಬಿಲಿಟಿ ಅಸಿಸ್ಟ್' ಸಾಧನ ಸೌಲಭ್ಯವನ್ನು ಬೆಂಗಳೂರಿನ ಕೆಐಎ ನಲ್ಲಿ ಪರಿಚಯಿಸಲಾಗಿದೆ.
ಕೇವಲ ಅಂಗವಿಕಲರು ಮಾತ್ರವಲ್ಲದೇ ಮಕ್ಕಳು ಸೇರಿದಂತೆ ಪ್ರಯಾಣದ ವೇಳೆ ಹೆಚ್ಚಿನ ಸಹಾಯದ ಅಗತ್ಯವಿರುವವರು, ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುರಕ್ಷಿತ, ಸುಗಮವಾಗಿ ವಿಮಾನದ ಬೋರ್ಡಿಂಗ್ ಮಾಡಲು 'ಮೊಬಿಲಿಟಿ ಅಸಿಸ್ಟ್' ಅನುಕೂಲವಾಗುತ್ತದೆ. ವಿಮಾನದಿಂದ ಇಳಿಯಲು ಅತ್ಯಾಧುನಿಕವಾಗಿ ವ್ಯವಸ್ಥೆಯು ಇದಾಗಿದೆ. ಎಚ್‌ಸಿಜಿ ಸಂಸ್ಥಾಪಕ ಡಾ. ಬಿ.ಎಸ್. ಅಜಯ್‌ಕುಮಾರ್ ಅವರು ತಮ್ಮ ಮಗ ಆದರ್ಶ್ ಅಜಯ್‌ಕುಮಾರ್ ಅವರ ಸ್ಮರಣಾರ್ಥ ಈ ಸಾಧನ ಏರ್‌ಪೋರ್ಟ್‌ಗೆ ನೀಡಿದ್ದಾರೆ.

ಡಚೆನ್ ಸ್ನಾಯು ಕ್ಷೀಣತೆ ಹೊಂದಿದ್ದ ಹಾಗೂ ವಿದ್ಯುತ್ ವೀಲ್‌ಚೇರ್ ಬಳಸುತ್ತಿದ್ದ ಆದರ್ಶ್, ವಿಮಾನ ನಿಲ್ದಾಣಗಳಲ್ಲಿ ಸೂಕ್ತ ರೀತಿಯಲ್ಲಿ ಇಳಿಯಲು ಹಾಗೂ ತಾನು ತಲುಪಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಒತ್ತಡ ಅನುಭವಿಸಿದ್ದರು. ಇವರ ಈ ವೈಯಕ್ತಿಕ ಅನುಭವವೇ ಇತರರಿಗೆ ನೆರವಾಗಲು ಸ್ಫೂರ್ತಿಯಾಯಿತು. ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರು ಸುಲಭವಾಗಿ ಈ ಅತ್ಯಾಧುನಿಕ ಉಪಕರಣದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆರಳಬಹುದಾಗಿದೆ.
ಮೊಬಿಲಿಟಿ ಅಸಿಸ್ಟ್ ಸಾಧನವು ವಿಮಾನದ ಬೋರ್ಡಿಂಗ್, ಡಿಪ್ಲೇನಿಂಗ್ ಅಥವಾ ಟರ್ಮಿನಲ್‌ಗಳ ನಡುವಿನ ಪ್ರಯಾಣದ ಸಮಯದಲ್ಲಿ ವೀಲ್‌ಚೇರ್‌ನಿಂದ ನೇರವಾಗಿ ಮಕ್ಕಳು ಮತ್ತು ನಡೆದುಕೊಂಡು ಹೋಗಲು ಆಗದವರು ಬಳಸಬಹುದು. ಇದು ಯಂತ್ರದಂತೆ ಕೆಲಸ ಮಾಡುತ್ತದೆ. ಬೋರ್ಡಿಂಗ್‌ಗೆ ಪ್ರಯಾಣಿಕರ ಸಾಗಾಣೆಗೆ ಸಹಾಯಕಾರಿಯಾಗಿದೆ. ದೈಹಿಕ ಒತ್ತಡ ಕಡಿಮೆ ಮಾಡುವ ಜೊತೆಗೆ, ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ನಾವು ಪ್ರಯಾಣ ಮಾಡುವಾಗ ಮಗನಿಗೆ ಇಂತಹ ಸೂಕ್ತ ಸೌಲಭ್ಯಗಳಿಲ್ಲದೇ ನನ್ನ ಮಗ ಆದರ್ಶ್ ಅನಾನುಕೂಲತೆ ಅನುಭವಿಸಿದ್ದ. ಆ ನೋವು ಅರಿತು ಏರ್‌ಪೋರ್ಟ್‌ಗೆ ಮೊಬಿಲಿಟಿ ಅಸಿಸ್ಟ್ ಕೊಡುಗೆಯಾಗಿ ನೀಡಿದ್ದೇನೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ವಿಮಾನ ನಿಲ್ದಾಣಗಳು ಅಳವಡಿಸಬಹುದಾದ ಉತ್ತಮ ಸೌಕರ್ಯವಾಗಿದೆ ಎಂದು ಅಜಯ್‌ಕುಮಾರ್ ಹೇಳಿದರು. BIAL ಸದಸ್ಯರು ಈ ಸೌಕರ್ಯ ಕಾರ್ಯ ನಿರ್ವಹಣೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
BIAL ಎಂಡಿ ಮತ್ತು ಸಿಇಒ ಹರಿ ಮರಾರ್ ಅವರು, "ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಸಮಾನ ಸೌಕರ್ಯ, ಸೌಲಭ್ಯ ನೀಡುವುದು ನಮ್ಮ ಉದ್ದೇಶವಾಗಿದೆ. ಮೊಬಿಲಿಟಿ ಅಸಿಸ್ಟ್ ಪರಿಚಯದ ಮೂಲಕ ವಿಶೇಷ ಚೇತನರು ಸಹ ಇನ್ನಷ್ಟು ಸುಲಲತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸಹಕಾರಿಯಾಗಿದೆ. ಇದು ಸಹ ಪ್ರಯಾಣಿಕರಿಗೆ ಮೂಲ ಸೌಕರ್ಯವಾಗಿ ಸೇವೆ ನೀಡುತ್ತದೆ ಎಂದರು.












Click it and Unblock the Notifications