ಬೆಂಗಳೂರಿನ ಈ ಭಾಗದಲ್ಲಿ ಎರಡು ದಿನ ಕಾಲೇಜಿಗೆ ರಜೆ ಘೋಷಣೆ
ಏಷ್ಯಾದ ಅತಿ ದೊಡ್ಡ ಏರ್ ಶೋಗೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 10ರಿಂದ ಚಾಲನೆ ಸಿಗಲಿದೆ. ಆದರೆ ಫೆಬ್ರವರಿ 13-14 ರಂದು ಸಾರ್ವಜನಿಕ ಪ್ರದರ್ಶನ ಇರಲಿದೆ. ಬೆಂಗಳೂರು ಈಗಾಗಲೇ ಏರ್ ಶೋ ಆಯೋಜನೆ ಮಾಡಲು ಸಿದ್ಧವಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಫೆಬ್ರವರಿ 13-14 ರಂದು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜನವರಿ 28ರಂದು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ಇದು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಆದರೆ ಯಾವ ಕಾಲೇಜುಗಳು ಎನ್ನುವುದನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಿಲ್ಲ.

ಏರೋ ಇಂಡಿಯಾ 2025, ಏಷ್ಯಾದ ಅತಿ ದೊಡ್ಡ ಏರ್ ಶೋ ಆಗಿದ್ದು ಜಗತ್ತಿನ ಹಲವು ದೇಶಗಳ ಗಣ್ಯರು, ರಕ್ಷಣಾ ಸಿಬ್ಬಂದಿ ಮತ್ತು ವಾಯುಯಾನ ವೀಕ್ಷಕರು ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಮತ್ತು ಯಾವುದೇ ತೊಂದರೆಯಾಗುವುದನ್ನು ತಪ್ಪಿಸಲು ಅಧಿಕಾರಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ.
ವಿಮಾನ ಸಂಚಾರದಲ್ಲಿ ವ್ಯತ್ಯಯ
ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಏರ್ ಶೋ ನಡೆಯಲಿದ್ದು ಈ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಸಮಯದಲ್ಲಿ ವ್ಯತ್ಯಯವಾಗಲಿದೆ. ವಾಯು ಪ್ರದರ್ಶನದ ಸಮಯದಲ್ಲಿ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ಮಾಂಸ ಮಾರಾಟಕ್ಕೆ ನಿಷೇಧ
ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಯಲಹಂಕ ವಾಯುಪಡೆ ನಿಲ್ದಾಣದ 13 ಕಿ.ಮೀ ವ್ಯಾಪ್ತಿಯಲ್ಲಿ 26 ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಬಿಬಿಎಂಪಿ ಕಾಯ್ದೆ 2020 ಮತ್ತು ವಿಮಾನ ನಿಯಮಗಳು 1937 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಸೋಮವಾರದಿಂದ ಏರ್ ಶೋ ಆರಂಭವಾಗಲಿದ್ದು ಈಗಾಗಲೇ ಯಲಹಂಕ ವಾಯುನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಈಗಾಗಲೇ ಬಂದಿಳಿದಿದ್ದು ಸಾಹಸ ಪ್ರದರ್ಶನಕ್ಕೆ ಸಜ್ಜಾಗಿವೆ. ಜಗತ್ತಿನ ಹಲವು ದೇಶಗಳ ಯುದ್ಧ ವಿಮಾನಗಳು ಏರ್ ಶೋನಲ್ಲಿ ಭಾಗವಹಿಸುವುದು ಮತ್ತೊಂದು ವಿಶೇಷ.












Click it and Unblock the Notifications