Bengaluru Air Quality : ಬೆಂಗಳೂರು ಹಲವೆಡೆ ಕಳಪೆ ಗುಣಮಟ್ಟದ ಗಾಳಿ ದಾಖಲು
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಗಾಳಿಯ ಕೊರತೆ ಕಂಡು ಬಂದಿದೆ. ನಗರದ ಅನೇಕ ಪ್ರದೇಶಗಳಲ್ಲಿ ಬುಧವಾರ ತೃಪ್ತಿಕರ ಗಾಳಿಯಿಂದ ಸಾಧಾರಣ ಮತ್ತು ಕಳಪೆ ಗುಣಮಟ್ಟದ ಗಾಳಿ ದಾಖಲಾಗಿದೆ.
ವಾಯು ಸರ್ವೇಕ್ಷಣಾ ಕೇಂದ್ರಗಳ ವರದಿ ಪ್ರಕಾರ, ಬೆಂಗಳೂರಲ್ಲಿ ಕೆಲವೆಡೆ ಮಾತ್ರವೇ ಉಸಿರಾಟಕ್ಕೆ ಯೋಗ್ಯವಾದ ಉತ್ತಮ ಗಾಳಿ ಬೀಸಿದೆ. ಉಳಿದಂತೆ ಸಾಕಷ್ಟು ಕಡೆಗಳಲ್ಲಿ ಉಸಿರಾಟಕ್ಕೆ ಯೋಗ್ಯವಲ್ಲದ, ಅನಾರೋಗ್ಯ ತರಬಹುದಾದ ಗಾಳಿ ಬೀಸಿದೆ. ಇದಕ್ಕೆ ದೀಪಾವಳಿ ಹಬ್ಬದಲ್ಲಿ ಹೆಚ್ಚಾಗಿ ಕಂಡು ಬಂದ ಪಟಾಕಿ ಹಾವಳಿ ಎನ್ನಲಾಗಿದೆ.
ಶುದ್ಧ ಗಾಳಿ ಬಳಕೆ, ಪರಿಸರ ಸ್ನೇಹಿ ಬ್ಲೂಟೂಥ್ ಹೆಲ್ಮೆಟ್
ಜನಸಂಖ್ಯೆ ಜೊತೆಗೆ ವಾಹನಗಳ ಸಂಖ್ಯೆ ಏರುಗತಿಯಲ್ಲಿರುವ ಬೆಂಗಳೂರಿನಲ್ಲಿ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಹೊಡೆಯುವುದರಿಂದ ಬಹುಬೇಗ ವಾಯು ಮಾಲಿನ್ಯಗೊಳ್ಳುತ್ತದೆ. ಸಾಮಾನ್ಯ ದಿನಗಳಲ್ಲಿ ವಾಹನ ದಟ್ಟಣೆ, ಹೊಗೆ ನಡುವೆಯು ಸಿಲ್ಕ್‌ಬೋರ್ಡ್, ಜಯನಗರ ಐದನೇ ಬ್ಲಾಕ್ ಹಾಗೂ ಇನ್ನಿತರ ಕೆಲವೇ ಪ್ರದೇಶ ಹೊರತುಪಡಿಸಿದರೆ ಉಳಿದೆಡೆ ಉತ್ತಮ ಗಾಳಿ ಕಂಡು ಬರುತ್ತದೆ.
ಹಬ್ಬಗಳಲ್ಲೂ ಪರಿಸರ ಕಾಳಜಿ ವಹಿಸಬೇಕಿದೆ
ಆದರೆ ಹಬ್ಬಗಳ ಸಂದರ್ಭದಲ್ಲಿ ವಾಹನಗಳ ಓಡಾಟ ತುಸು ಕಡಿಮೆ ಇದ್ದರೂ ಸಹ ಪಟಾಕಿಗಳ ಕಾರಣದಿಂದ ಬೇಗನೇ ಗಾಳಿ ಕಲುಷಿತಗೊಳ್ಳಿತ್ತದೆ. ಸಾರ್ವಜನಿಕರು ಸಾಂಪ್ರದಾಯಿಕ ಹಬ್ಬ ಆಚರಣೆ ಜೊತೆಗೆ ಪರಿಸರ ಕಾಳಜಿ ವಹಿಸುವುದು ಅಗತ್ಯವಾಗಿದೆ.
ವಾಯುಗುಣಮಟ್ಟ ಸೂಚ್ಯಂಕ (AQI) 0-50 ಇದ್ದರೆ ಗಾಳಿ ಉತ್ತಮವಾಗಿದೆ ಎನ್ನಬಹುದು. AQI ಮಟ್ಟ 50-100ರ ಒಳಗೆ ಇದ್ದರೆ ತೃಪ್ತಿಕರ, AQI ಮಟ್ಟ 100 ರಿಂದ 150 ಇದ್ದರೆ ಅದನ್ನು ಸಾಧಾರಣ ಮತ್ತು ಕಳಪೆ ಗುಣಮಟ್ಟದ ಗಾಳಿ ಎಂದು ಕರೆಯಲಾಗುತ್ತದೆ.

ಅನೇಕ ಕಡೆ ಸಾಧಾರಣದಿಂದ ಕಳಪೆ ಗಾಳಿ
ಬುಧವಾರ ಮಧ್ಯಾಹ್ನ 12ಗಂಟೆ ವೇಳೆಗೆ ನಗರದಲ್ಲಿ ಚನ್ನಸಂದ್ರದಲ್ಲಿ ಉತ್ತಮ (AQI 30) ಗಾಳಿ ದಾಖಲಾಗಿದೆ. ಕೃಷ್ಣರಾಜಪುರ (25), ಕುಂದಲಹಳ್ಳಿ ಕಾಲೋನಿ (46),ಪ್ರೆಸ್ಟೀಜ್ ಪಾರ್ಕ್ ವ್ಯೂವ್ (50), ಸಿದ್ದಾಪುರ (50)ಗಳಲ್ಲಿ ಉತ್ತಮ ಗಾಳಿ ದಾಖಲಾಗಿದೆ. ಬೊಮ್ಮನಹಳ್ಳಿಯಲ್ಲಿ ಸಾಧಾರಣ (AQI 78), ಚಿನ್ನಪ್ಪನಹಳ್ಳಿ, ಕಾಕ್ಸ್‌ಟೌನ್, ಸಿವಿ ರಾಮನ್ ನಗರ, ಈಜಿಪುರ, ಇಸ್ರೋ ಕಾಲೋನಿಯಲ್ಲಿ ಸಾಧಾರಣ ಗುಣಮಟ್ಟದ ಗಾಳಿ ಕಂಡು ಬಂದಿದೆ. ಜೊತೆಗೆ ಹೆಬ್ಬಾಳ, ಹೊಂಬೇಗೌಡ ನಗರ, ಜಯನಗರ 5ನೇ ಬ್ಲಾಕ್, ಪೀಣ್ಯ, ಸಿಲ್ಕ್‌ಬೋರ್ಡ್, ವಿಜಯನಗರದಲ್ಲಿ ಕಳಪೆ (AQI 120ಕ್ಕೂ ಹೆಚ್ಚು) ವಾಯು ಕಂಡು ಬಂದಿದೆ ಎಂದು ವರದಿ ತಿಳಿಸಿದೆ.