Bengaluru: ವೃದ್ಧೆಯ ಶವ ಡ್ರಮ್‌ನಲ್ಲಿ ಕತ್ತರಿಸಿದ ರೀತಿ ಪತ್ತೆ: ದೆಹಲಿ ಕೊಲೆ ನೆನಪಿಸಿದ ಘಟನೆ
ಬೆಂಗಳೂರು, ಫೆಬ್ರವರಿ 26: ದೆಹಲಿಯಲ್ಲಿ ತನ್ನ ಪ್ರೇಮಿಯ ದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ, ಹತ್ಯೆ ಮಾಡಿದ ಘಟನೆ ಕೇಳಿದ್ದೀರಿ. ಇದೀಗ ಅಂತದ್ದೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬರ ದೇಹವನ್ನು ಕತ್ತರಿಸಿಟ್ಟು ಡ್ರಮ್‌ನಲ್ಲಿ ತುಂಬಿಟ್ಟ ಘಟನೆ ನಡೆದಿದೆ.
ಹೌದು, ಬೆಂಗಳೂರಿನ ಕೆ.ಆರ್ ಪುರಂ ಪ್ರದೇಶದಲ್ಲಿ 70 ವರ್ಷದ ವೃದ್ಧ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಛಿದ್ರಗೊಂಡ ದೇಹವನ್ನು ಡ್ರಮ್‌ನಲ್ಲಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಅತ್ಯಧಿಕ ಜನ ದಟ್ಟಣೆ ಇರುವ ನಗರದ ಕೆ.ಆರ್‌ಪುರಂ 70 ವರ್ಷದ ವೃದ್ಧ ಮಹಿಳೆಯ ದೇಹ ಕತ್ತರಿಸಿ ತ್ಯಜಿಸಿದ ಮನೆಯ ಸಮೀಪವಿರುವ ಖಾಲಿ ಜಾಗದಲ್ಲಿ ಎಸೆದ ಧಾರುಣ ಘಟನೆ ನಡೆದಿದೆ. ಸದ್ಯ ಮೃತ ಮಹಿಳೆಯನ್ನು ಸಶೀಲಮ್ಮ ಎಂದು ಪೊಲೀಸರು ಗುರುತಿಸಿದ್ದಾರೆ.
ಸುಶೀಲಮ್ಮ ಹತ್ಯೆಗೀಡಾದ ದುರ್ದೈವಿ
ಕೆಆರ್ ಪುರಂ ಸಮೀಪದ ನಿಸರ್ಗ ಲೇಔಟ್ ಬಳಿಯ ಬಾಡಿಗೆ ಫ್ಲಾಟ್‌ನಲ್ಲಿ ಈ ಮೃತ ಮಹಿಳೆಯೊಬ್ಬರು ವಾಸ ಮಾಡುತ್ತಿದ್ದರು. ಮೃತ ಸುಶೀಲಮ್ಮಳ ಜತೆಗೆ ಅವರ ಇಬ್ಬರು ಮಕ್ಕಳು ಮತ್ತು ಕೆಲ ಸಂಬಂಧಿಕರು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೂರ್ವದ ಹೆಚ್ಚುವರಿ ಆಯುಕ್ತ ರಮಣ್ ಗುಪ್ತಾ ಮಾಹಿತಿ ನೀಡಿದ್ದಾರೆ.
ವೃದ್ಧ ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಅವರ ಕೈಕಾಲುಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ದೇಹದ ಭಾಗಗಳನ್ನು ಡ್ರಮ್‌ನಲ್ಲಿ ತುಂಬಿಟ್ಟಿದ್ದಾರೆ. ಅದನ್ನು ಸ್ಥಳೀಯ ಖಾಲಿ ಜಾಗವೊಂದರಲ್ಲಿ ಬೀಡಾಡಿದ್ದರು. ಸ್ಥಳದಲ್ಲಿ ದುರ್ವಾಸನೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ಕೊಲೆ ನಡೆದಿರುವ ಶಂಕೆ
ದೂರು ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಡ್ರಮ್‌ನಲ್ಲಿ ಯಾರೋ ಮಹಿಳೆಯನ್ನು ಕೊಂದು ಶವ ತುಂಬಿರುವುದು ಗೊತ್ತಾಗಿದೆ. ಘಟನೆಯು ಭಾನುವಾರ ನಡೆದಿರಬಹುದು ಎಂದು ಶಂಕಿಸಿರುವ ಪೊಲೀಸರು ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ಅಗತ್ಯ ತನಿಖೆ ಕೈಗೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಸಾಧ್ಯವಾದಷ್ಟು ಬೇಗ ದುಷ್ಕರ್ಮಿಗಳನ್ನು ಹಿಡಿಯುವ ಕಾಯ ಮುಂದುವರಿಸಿದ್ದೇವೆ ಎಂದು ಅವರು ತಿಳಿಸಿದರು.
ಯಾವ ಕಾರಣಕ್ಕೆ ಈ ಮಹಿಳೆಯ ಹತ್ಯೆ ನಡೆದಿದೆ. ಯಾರು ಮಾಡಿದ್ದು ಎಂಬೆಲ್ಲ ಮಾಹಿತಿಗಳು ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಲಿವೆ.












Click it and Unblock the Notifications