ಬೆಂಗಳೂರಲ್ಲಿ 7 ಕೋಟಿ ರೂಪಾಯಿ ದರೋಡೆ ಪ್ರಕರಣ ಮಹತ್ವದ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ ಪರಮೇಶ್ವರ್
ಬೆಂಗಳೂರು, ನವೆಂಬರ್ 19: ನಗರದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಹಿಡಿಯುತ್ತೇವೆ ಬಿಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದಿರುವ ಪ್ರಕರಣವು ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಜ್ಯ ಸರ್ಕಾರವು ತಿಳಿಸಿದೆ. ಇನ್ನು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದಾರೆ. ಇದಕ್ಕೆ ಕಾರಣೀಕರ್ತರು ಏನು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದರೋ ಎಂಬುದರ ಬಗ್ಗೆ ಈವಾಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಹಾಡುಹಗಲಲ್ಲೇ ಇಂತಹ ಘಟನೆ ನಡೆದಿಲ್ಲ. ಏಳು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ವಾಹನ ಸಂಖ್ಯೆ ಎಲ್ಲ ಮಾಹಿತಿ ಸಿಕ್ಕಿದೆ. ಕೃತ್ಯ ಎಸಗಿದವರು ಇಲ್ಲಿಯವರಾ? ಹೊರ ರಾಜ್ಯದಲ್ಲಿಯವರಾ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿ ಸಿಕ್ಕಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಖಂಡಿತವಾಗಿ ಅವರನ್ನು ಹಿಡಿದು ಹಾಕುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಟೀಕೆ: ಇನ್ನು ಬೆಂಗಳೂರಿನಲ್ಲಿ ನಡೆದಿರುವ ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತೀವ್ರ ಟೀಕೆ ಮಾಡಿವೆ.
ರಾಜಧಾನಿ ಬೆಂಗಳೂರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಆ ದಿನಗಳ ಬೆಂದಕಾಳೂರಾಗಿ ಬದಲಾಗುತ್ತಿದೆ. ಅಸಮರ್ಥ ಗೃಹ ಸಚಿವ ಜಿ.ಪರಮೇಶ್ವರ್ ಅವರ ಕಾರಣದಿಂದ ಒಂದು ಕಡೆ ಬೆಂಗಳೂರಿನ ವಿಧಾನಸೌಧದ ಮುಂದೆಯೇ ಗಲಭೆ ಆಗುತ್ತಿದ್ದರೆ, ಮತ್ತೊಂದಡೆ ಹಾಡಹಗಲೇ ದರೋಡೆಕೋರರು ಡೇರಿ ಸರ್ಕಲ್ ಬಳಿ ಸುಮಾರು 7 ಕೋಟಿ ರೂ. ಬ್ಯಾಂಕ್ ಸಿಬ್ಬಂದಿಯಿಂದ ದೋಚಿಕೊಂಡು ಹೋಗಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರ ದಿನ ದಿನಕ್ಕೂ ದುರ್ಬಲವಾಗುತ್ತಿರುವುದರಿಂದಲೇ ಗಲಭೆಕೋರರು, ದರೋಡೆಕೋರರು, ಗೂಂಡಗಳು ಬೀದಿಗಿಳಿದು ರಾಜಾರೋಷವಾಗಿ ಮೆರೆದಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಭ್ರಷ್ಟಾಚಾರಗಳಿಗೆ ದಿನ ನಿತ್ಯ ನಡೆಯುತ್ತಿರುವ ಕರ್ಮಕಾಂಡಗಳೇ ಸಾಕ್ಷಿ ಹೇಳುತ್ತಿವೆ. ಅತ್ತ ಹಾವೇರಿಯಲ್ಲಿ ನವಜಾತ ಶಿಶುವಿನ ದುರಂತ ಅರೋಗ್ಯ ಇಲಾಖೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದ್ದರೆ, ಈಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಎಷ್ಟರ ಮಟ್ಟಿಗೆ ಮರೀಚಿಕೆಯಂತಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಜನರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಎಂದೋ ಕಳೆದುಹೋಗಿದೆ. ಗೃಹ ಇಲಾಖೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿಕೊಳ್ಳಲಾದರೂ ಕೂಡಲೇ ದರೋಡೆಕೋರರನ್ನು ಬಂಧಿಸಬೇಕಾಗಿದೆ. ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ATM ಕ್ಯಾಶ್ ವ್ಯಾನ್ ಅಡ್ಡಗಟ್ಟಿ ದರೋಡೆಕೋರರು 7 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ.
ನಗರದ ಮಧ್ಯಭಾಗದಲ್ಲಿ, ಹಾಡುಹಗಲೇ ನಡೆದಿರುವ ದರೋಡೆ ಸಹಜವಾಗಿ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುಷ್ಕರ್ಮಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿರುವುದು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಬಂಧಿಸಬೇಕು ಎಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ ಎಂದಿದ್ದಾರೆ.












Click it and Unblock the Notifications