ಮುಂದುವರಿದ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯಾಚರಣೆ: ಯಲಹಂಕದಲ್ಲಿ 70 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ!
ಬೆಂಗಳೂರು ಅಕ್ಟೋಬರ್ 09: ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ಯಲಹಂಕ ತಾಲೂಕು, ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರಲ್ಲಿ ಖಾಸಗಿಯವರಿಂದ ಒತ್ತುವರಿಯಾಗಿದ್ದ ಸುಮಾರು 70 ಕೋಟಿ ರೂ. ಮೌಲ್ಯದ 6.05 ಎಕರೆ ಸರ್ಕಾರಿ ಜಮೀನನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ವಾರದಲ್ಲಿ ಕಂದಾಯ ಇಲಾಖೆ ನಡೆಸುತ್ತಿರುವ ನಾಲ್ಕನೇ ಒತ್ತುವರಿ ಕಾರ್ಯಾಚರಣೆ ಇದಾಗಿದೆ. ಈ ಮೂಲಕ ಭೂ ಒತ್ತುವರಿದಾರರು ಹಾಗೂ ಭೂ ಮಾಫಿಯಾಗೆ ಸರ್ಕಾರ ಬಿಸಿ ಮುಟ್ಟಿಸಿದೆ.

ಕಂದಾಯ ಇಲಾಖೆ ಜವಾಬ್ದಾರಿ ವಹಿಸುತ್ತಿದ್ದಂತೆ ಬೆಂಗಳೂರಿನಾದ್ಯಂತ ಭೂ ಒತ್ತುವರಿ ತೆರವು ಮಾಡುವಂತೆ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾನಾ ಕಡೆಗಳಲ್ಲಿ ತೆರವು ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ.
ಅಧಿಕಾರಿಗಳು ಒತ್ತುವರಿದಾರರ ಪಟ್ಟಿ ತಯಾರಿಸಿ ಪ್ರತಿ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನ ನಂತರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಒತ್ತುವರಿ ತೆರವು ಮಾಡಲಾಗುವುದು ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದ ಸಚಿವರು, ಜಿಲ್ಲಾವಾರು ಒತ್ತುವರಿ ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಯಲಹಂಕ ತಾಲೂಕಿನ ಒತ್ತುವರಿಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಯಲಹಂಕದ ಬಾಗಲೂರಿನ ಬಳಿ 66 ಕೋಟಿ ರೂ. ಮೌಲ್ಯದ 6.07 ಎಕರೆ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಲಾಗಿತ್ತು. ಇದರ ಬೆನ್ನಿಗೆ ಕಟ್ಟಿಗೇನಹಳ್ಳಿಯಲ್ಲೂ 70 ಕೋಟಿ ರೂ. ಮೌಲ್ಯದ 6.05 ಎಕರೆ ಮೌಲ್ಯದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಯಲಹಂಕ ತಾಲ್ಲೂಕು ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರ ಜಮೀನಿಗೆ ಸಂಬಂಧಿಸಿದಂತೆ, ಗೋಮಾಳದ ಜಮೀನಿಗೆ ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ಮತ್ತು ಜಮೀನಿನಲ್ಲಿ ಯಾವುದೇ ಖಾತೆ ಅನುಭವವಿಲ್ಲದೇ ಇರುವ ಒತ್ತುವರಿದಾರರನ್ನು ಖುಲ್ಲಾಪಡಿಸಿ ಕ್ರಮವಹಿಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 104 ರ ಅಡಿ ವಿಚಾರಣೆ ನಡೆಸಲು ನಿರ್ಧರಿಸಿ ಪ್ರತಿವಾದಿಗಳಿಗೆ ನೋಟೀಸ್ ಕೂಡ ನೀಡಲಾಗಿತ್ತು. ಅದರಂತೆ ಕಟ್ಟಿಗೇನಹಳ್ಳಿಯ ಸರ್ವೆ ನಂ.28 ರ ಜಮೀನಿನಲ್ಲಿ ತಾಲೂಕು ಮೋಜಿಣಿದಾರರು ಒತ್ತುವರಿ ಎಂದು ಗುರುತಿಸಿದ 6.05 ಎಕರೆ ಜಮೀನನ್ನು ಇಂದು (ಸೋಮವಾರ) ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಒತ್ತುವರಿದಾರರ ವಿವರ:
*ಕೋಗಿಲು ಗ್ರಾಮದ ಸರ್ವೆ ನಂ. 100 ರ ಹಿಡುವಳಿದಾರರಾದ ಉಡುಪ ಅವರಿಂದ ಕಟ್ಟಿಗೇನಹಳ್ಳಿಯ ಸರ್ವೆ ನಂ.28 ರಲ್ಲಿ 0-10 ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದು, ಇದನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
*ಎಸ್.ಜಯರಾಮ್ ಬಿನ್ ಸುಬ್ರಮಣ್ಯ ಮೊದಲಿಯಾರ್ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0-20 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
*ಸುಬ್ಬಣ್ಣ ಬಿನ್ ಚಿಕ್ಕಮುನಿಯಪ್ಪ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 2-29 ಎಕರೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
*ದೊಡ್ಡಕ್ಕಮ್ಮ ಕೋಂ ಲೇಟ್ ಕೆ.ಮುನಿಯಪ್ಪ, ಮುನಿರಾಜು ಮತ್ತು ಎಂ. ಮಂಜುನಾಥ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0-12 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
*ವೈ.ಜಿ.ಕೇಶವ ಬಿನ್ ಗೋವಿಂದಪ್ಪ ಅವರಿಗೆ ಸಂಬಂಧಿಸಿದಂತೆ, ನಂ.ಎಲ್ಎನ್ ಡಿ/ಎಸ್ ಆರ್/1/104/78-79 ರಂತೆ ಅಬ್ದುಲ್ ಸತ್ತಾರ್ ರವರಿಗೆ 2-00 ಎಕರೆ ಮಂಜೂರಾಗಿತ್ತು. ನಂತರ ಕ್ರಯವಿಕ್ರಯ ನಡೆದು, ವೈ.ಜಿ ಕೇಶವ ಬಿನ್ ಗೋವಿಂದಪ್ಪ ರವರಿಗೆ ಖಾತೆ ದಾಖಲಾಗಿತ್ತು. ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರದ ಹೆಸರಿಗೆ ಖಾತೆ ದಾಖಲಾಗಿ, ಗೋಮಾಳ ಶೀರ್ಷಿಕೆಯಲ್ಲಿ ಖಾತೆ ಮುಂದುವರೆಯುತ್ತಿದೆ. 2.00 ಎಕರೆ ಜಮೀನಿನ ಪ್ರಕರಣ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಇವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0.05 ಗುಂಟೆ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
*ರಮೇಶ್ ಬಿನ್ ಚಿಕ್ಕಪಾಪಮ್ಮ ಅವರು ಹೆಚ್ಚುವರಿಯಾಗಿ ಸ್ವಾಧೀನ ಹೊಂದಿರುವ 0.12 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇದೇ ಗ್ರಾಮದಲ್ಲಿ ಬ್ಲಾಕ್ ನಂ.12ರಲ್ಲಿ 0.15 ಗುಂಟೆ ವಿಸ್ತೀರ್ಣದಲ್ಲಿ 4 ಮನೆಗಳು ನಿರ್ಮಾಣವಾಗಿದ್ದು, ತೆರವುಗೊಳಿಸಲು ಮೌಖಿಕವಾಗಿ 2 ದಿನಗಳ ಕಾಲಾವಕಾಶ ಕೋರಿದ್ದರು. ಅದರಂತೆ ಕಾಲಾವಕಾಶ ನೀಡಿ, ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವುಗೊಳಿಸಲಾಗಿದೆ. [7]
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications