ಸಾಲದ ನೆಪದಲ್ಲಿ 1 ಕೋಟಿ ರೂ ನಕಲಿ ನೋಟು ನೀಡಿದ್ದ ಮೂವರ ಬಂಧನ !
ಬೆಂಗಳೂರು,ಡಿ.26: ಉದ್ಯಮಿಯೊಬ್ಬರಿಗೆ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡುವ ಮೂಲಕ ವಂಚಿಸಿದ ಆರೋಪದ ಮೇಲೆ ಮೂವರು ಆರೋಪಿಗಳ ಹಡೆಮುರಿಕಟ್ಟುವಲ್ಲಿ ಜಯನಗರ ಪೋಲಿಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜಯನಗರದ ಜೆ.ಎನ್ ಪ್ರಾಜೆಕ್ಟ್ ಪಾಲುದಾರ ಎನ್. ಪಾರ್ಥಸಾರಥಿ ಅವರಿಗೆ 13 ಕೋಟಿ ರೂಪಾಯಿ ಸಾಲವಾಗಿ ನೀಡುವುದಾಗಿ ನಂಬಿಸಿ ಅವರಿಂದ 27ಲಕ್ಷ ರೂಪಾಯಿ ಹಣವನ್ನು ಕಮಿಷನ್ ರೂಪದಲ್ಲಿ ಪಡೆದು ವಂಚಿಸಿದ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ಈ ವಂಚಕರ ಜಾಲ ಬೆನ್ನಟ್ಟಿದ ಪೋಲಿಸರು, ಆರೋಪಿಗಳಾದ ಆರ್‌ಟಿ ನಗರದ ಮನ್ನಾ ಶರುಣ್(35), ಆರ್ ವಿಷ್ಣು ರಾಜನ್(26) ಮತ್ತು ರಾಮಮೂರ್ತಿ ನಗರದ ಪ್ರವೀಣ್ ಕುಮಾರ(40) ಎಂಬಾತರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳಾದ ಆಶಾಲತಾ ರಾವ್,ಲಕ್ಷ್ಮಣ್ ರಾವ್ ಮತ್ತು ತುಷಾರ್ ತೆಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ಪೋಲಿಸರು ತೀವ್ರವಾದ ಹುಡುಕಾಟ ನಡೆಸಿದ್ದಾರೆ.

ಬಂಧಿತ ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ ಒಂದು ಕೋಟಿ ಮೊತ್ತದ ಖೋಟಾ ನೋಟುಗಳು, ಎರಡು ಐಷಾರಾಮಿ ಕಾರುಗಳು, 20 ಲಕ್ಷ ರೂ ನಗದು ಸೇರಿದಂತೆ 6 ಕೆಜಿ ತೂಕದ ನಕಲಿ ಚಿನ್ನದ ಬಿಸ್ಕತ್ ಹಾಗೂ ನಕಲಿ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು ?
ಕಟ್ಟಡ ನಿರ್ಮಾಣಕ್ಕಾಗಿ ಪಾರ್ಥಸಾರಥಿ ಬಾಣಸವಾಡಿಯಲ್ಲಿರುವ ಬ್ಯಾಂಕ್‌ವೊಂದರಲ್ಲಿ 1.75 ಕೋಟಿ ರೂಪಾಯಿ ಸಾಲ ಮಾಡಿದ್ದರು. ವ್ಯವಹಾರದಲ್ಲಿ ಉಂಟಾದ ಅತೀವ ನಷ್ಟದಿಂದ ಸಾಲ ಮರುಪಾವತಿಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಲ್ಡರ್ ಹಾಗೂ ಎಂಜಿನಿಯರ್‌ಗಳಾದ ಮನ್ನಾ ಶರುಣ್, ಆರ್ ವಿಷ್ಣುರಾಜನ್ ಮತ್ತು ಪ್ರವೀಣ್ ಕುಮಾರ ಅವರ ಪರಿಚಯವಾಗಿದೆ. ಮೊದಲ ಹಂತದಲ್ಲಿ 1 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದ ವಂಚಕರು, ಉಳಿದ 12 ಕೋಟಿ ರೂಪಾಯಿಯನ್ನು ದಿನದ ನಂತರ ವರ್ಗಾಯಿಸುವುದಾಗಿ ಭರವಸೆ ನೀಡಿದರು. ಅವರನ್ನು ನಂಬಿದ ಪಾರ್ಥಸಾರಥಿ ಅವರು ಬಂಧಿತರ ಬ್ಯಾಂಕ್ ಖಾತೆಗೆ 26 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ನಂತರ ಪಾರ್ಥಸಾರಥಿ 1 ಕೋಟಿ ರೂ.ಗಳಿದ್ದ ಬ್ಯಾಗ್ ತೆರೆದು ಪರಿಶೀಲಿಸಿದಾಗ 10 ಬಂಡಲ್ ಕರೆನ್ಸಿ ಸಿಕ್ಕಿವೆ. ಅದರೇ ಆ ನೋಟುಗಳ ಬಂಡಲ್ ಮೇಲೆ ಹಾಕಲಾಗಿದ್ದ 500 ರೂಪಾಯಿ ನೋಟು ಮಾತ್ರ ಅಸಲಿಯಾಗಿತ್ತು.ಉಳಿದವು ನಕಲಿ ನೋಟುಗಳಾಗಿವೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ವಂಚಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು !
ಬಂಧಿತ ಆರೋಪಿಗಳು ಅಮಾಯಕ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿಕೊಂಡಿರುತ್ತಿದ್ದರು. ಸಾಲ ಕೊಡಿಸುವ ನೆಪದಲ್ಲಿ ಕಮಿಷನ್ ಪಡೆದು ವಂಚಿಸುವುದು, ನಕಲಿ ಚಿನ್ನ ಮಾರಾಟ ಮಾಡುವುದು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಈ ಆರೋಪಿಗಳು ಹಲವು ಸಾರ್ವಜನಿಕರನ್ನು
ವಂಚಿಸಿರುವ ಗುಮಾಣಿಯಿದ್ದು ತನಿಖೆಯ ಮೂಲಕ ಸಂಪೂರ್ಣ ಸತ್ಯವನ್ನು ಬಹಿರಂಗ ಪಡಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಜಯನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 420,406, 489ಎ, 489 ಬಿ,489ಸಿ,489E ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳಾದ ಆಶಾಲತಾ ರಾವ್, ಲಕ್ಷ್ಮಣ್ ರಾವ್ ಮತ್ತು ತುಷಾರ್ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಪೋಲಿಸರು ಜಾಲ ಬೀಸಿದ್ದಾರೆ.












Click it and Unblock the Notifications