ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವಿದ್ಯುತ್ ತಂತಿ ತಗುಲಿ ಯುವತಿ ಸಾವು
ಬೆಂಗಳೂರು, ಸೆಪ್ಟಂಬರ್ 05: ಕೆಲಸದಿಂದ ಮನೆಗೆ ತೆರಳುತ್ತಿದ್ದ ಯುವತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಆಕಸ್ಮಿಕವಾಗಿ ತಗುಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪ ಸೋಮವಾರ ರಾತ್ರಿ 9.30ಗಂಟೆಗೆ ಈ ಅವಘಡ ನಡೆದಿದೆ. ಈ ವೇಳೆ ಅಖಿಲಾ (23) ಮೃತಪಟ್ಟ ಯುವತಿ ಎಂಬುದು ಗೊತ್ತಾಗಿದೆ.
ನಿರಂತರ ಮಳೆಯಿಂದ ಬೆಂಗಳೂರಿನಾದ್ಯಂತ ರಸ್ತೆ, ಬಡಾವಣೆ ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ವೈಟ್‌ಫಿಲ್ಡ್‌ನಲ್ಲೂ ಆಗಿದೆ. ಅಖಿಲಾ ತನ್ನ ಕೆಲಸದ ಸ್ಥಳದಿಂದ ಮನೆಗೆ ಹಿಂತಿರುಗುವಾಗ ಮಳೆ ನೀರಿನಿಂದ ಜಲಾವೃತಗೊಂಡಿದ್ದ ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಅವರ ಸ್ಕೂಟಿ ಸ್ಕಿಡ್ ಆಗಿದೆ. ಈ ವೇಳೆ ಯುವತಿ ಆಸರೆಗಾಗಿ ಸಮೀಪದ ವಿದ್ಯುತ್ ಕಂಬವನ್ನು ಹಿಡಿಯಲು ಪ್ರಯತ್ನಿಸಿದ್ದಾಳೆ. ಈ ವೇಳೆ ವಿದ್ಯುತ್ ಕಂಬ ಮುಟ್ಟಿದೆ ಅಖಿಲಾಗೆ ವಿದ್ಯುತ್ ಶಾಕ್ ತಗುಲಿದ್ದು, ಅವರು ಸ್ಥಳದಲ್ಲೇ ಬಿದ್ದಿದ್ದಾರೆ.
ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯ ಕಾರಣ ಎಂದು ಆರೋಪ:
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ. ಅಖಿಲಾ ಶಾಲೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಮೃತರ ಕುಟುಂಬವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವಿದ್ಯುತ್ ಹಾಗೂ ಇನ್ನಿತರ ವ್ಯವಸ್ಥೆಗಳ ಅಸಮರ್ಪಕ ನಿರ್ವಹಣೆವೇ ಅಖಿಲಾ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ತಿಂಗಳಾಂತ್ಯಕ್ಕೆ ಮದುವೆ ಸಿದ್ದವಾಗಬೇಕಿದ್ದ ಇಂಜಿನಿಯರ್ ಆತ್ಮಹತ್ಯೆ?
ಮತ್ತೊಂದು ಪ್ರಕರಣದಲ್ಲಿ ನಗರದ ಕೆಂಗೇರಿ ವ್ಯಾಪ್ತಿಯ ಕೊಮ್ಮಘಟ್ಟದ ಬಿಡಿಎ ಅಪಾರ್ಟ್ಮೆಂಟ್‌ಮೆಂಟ್ 27 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರೋಹಿತ್ ಜಿ ಎಂಬುವವರು ತಮ್ಮ ಅಪಾರ್ಟ್ಮೆಂಟ್‌ನ ಫ್ಲ್ಯಾಟ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದಾರೆ. ಮೃತ ರೋಹಿತ್ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರೋಹಿತ್‌ಗೆ ಈ ತಿಂಗಳ ಅಂತ್ಯದಲ್ಲಿ ಮದುವೆ ನಿಗದಿಯಾಗಿತ್ತು. ಖಿನ್ನತೆಯಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ರೋಹಿತ್ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ. ಖಿನ್ನತೆ ಕಾರಣಕ್ಕೆ ತಾನು ಆತ್ಮಹತ್ಯೆಗೆ ನಿರ್ಧರಿಸಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೃತರ ತಂದೆ ರಾಘವೇಂದ್ರ ರಾವ್ ನೀಡಿದ ದೂರಿನ ಮೇರೆಗೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿದರು.
ಮದುವೆ ಸಿದ್ಧತೆ ಮಾಡಿಕೊಂಡಿದ್ದ ರೋಹಿತ್
ಶನಿವಾರವಷ್ಟೇ ರೋಹಿತ್ ಪೋಷಕರ ಜತೆ ನಗರದ ಚಿಕ್ಕಪೇಟೆಗೆ ಮಾರುಕಟ್ಟೆಗೆ ತೆರಳಿ ಹೋಗಿ ಮದುವೆಗೆ ಬಟ್ಟೆ ಬರೆ, ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಿದ್ದರು. ನಂತರ ಸಂಜೆ ಮನೆಗೆ ಹಿಂದಿರುಗಿದ್ದ ರೋಹಿತ್ ಕುಟುಂಬಸ್ಥರೊಂದಿಗೆ ಒಟ್ಟಿಗೆ ಸಮಯ ಕಳೆದಿದ್ದರು. ಇದಾದ ಬಳಿಕ ರಾತ್ರಿ ಎಲ್ಲರೂ ಮಲಗಿದ್ದಾರೆ. ಈ ವೇಳೆ ರೋಹಿತ್ ರಾತ್ರಿ 1 ಗಂಟೆಯವರೆಗೆ ಎಚ್ಚರವಿದ್ದರು.
ಬೆಳಗ್ಗೆ 6 ಗಂಟೆ ಸುಮಾರಿಗೆ ಆತನ ಕೋಣೆಗೆ ರೋಹಿತ್ ತಾಯಿ ಹೋದಾಗಿ ಹಗ್ಗದಿಂದ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.
ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಪೊಲೀಸರಿಂದ ತಿಳಿದು ಬರಬೇಕಿದೆ. ರೋಹಿತ್ ಡೆತ್ ನೋಟ್ ಪ್ರಕಾರ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications