BBMP Scam: ಬಿಬಿಎಂಪಿಯಿಂದ 223 ಕೋಟಿ ರೂ. ಮೊತ್ತದ ವಾಹನ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಎಎಪಿ ಆಗ್ರಹ
ಬೆಂಗಳೂರು, ಏಪ್ರಿಲ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (BBMP) 166 ಹುದ್ದೆಗಳ ವಾಹನ ಖರೀದಿಯಲ್ಲಿ ಅಕ್ರಮವೆಸಗಿದೆ. ಕೋಟ್ಯಂತರ ರೂಪಾಯಿ ಹಣ ಲೂಟಿಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು,ಬಿಬಿಎಂಪಿಯು ಹೊರಡಿಸಿರುವ ಆದೇಶದ ಪ್ರಕಾರ 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೆ ಬಿಬಿಎಂಪಿಯು ವಾಹನಗಳನ್ನು ಪೂರೈಸುತ್ತಿದೆ. ಆದರೆ ಈ ಪೈಕಿ ಶೇಕಡಾ 90ರಷ್ಟು ಜನರಿಗೆ ವಾಹನ ವಿತರಿಸಿಲ್ಲ ಎಂದು ಆರೋಪಿಸಿದರು.

ಈ ವಾಹನ ಪೂರೈಕೆ ಯೋಜನೆಯು ಒಟ್ಟು 223 ಕೋಟಿ ರೂಪಾಯಿಯ ಕಾರ್ಯಕ್ರಮವಾಗಿದೆ. ವಾಹನ ವಿತರಿಸದ ಕಾರಣ ಇಷ್ಟು ಪ್ರಮಾಣದ ಹಣ ಎಲ್ಲಿ ಹೋಗಿದೆ. ಆ ಬಗ್ಗೆ ಅಗತ್ಯ ತನಖೆಯಾಗಬೇಕು. ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ವಾಹನ ವಿತರಣೆ ಸಂಬಂಧ ಅಧಿಕಾರಿಗಳು ಸರ್ಕಾರದಲ್ಲಿನ ಖಾತೆಗಳ ವಿಭಾಗದಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದ ಹಣ ಏನಾಯಿತು? ಎಂಬ ಫಲಾನುಭವಿಗಳ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ. ಹೀಗೆ ಪ್ರಶ್ನಿಸುವವರು ವಾಹನವನ್ನು ಸ್ವೀಕರಿಸಿಲ್ಲ. ಲೆಕ್ಕಪತ್ರ ಇಲಾಖೆಯು ಬಿಲ್‌ಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದ್ದು, ಕೆಲವರು ಬಿಬಿಎಂಪಿಯ ಹಣಕಾಸು ವಿಭಾಗದಿಂದ ಹಂಚಿಕೆ ಮಾಡಿದ್ದನ್ನು ಬಹಿರಂಗವಾಗಿ ಕೇಳಿದ್ದಾರೆ. ಆದ್ದರಿಂದ ಬಿಬಿಎಂಪಿ ವಿರುದ್ಧ ತನಿಖೆಯಾಗಬೇಕು ಎಂದು ಹೇಳಿದರು.
ಬಿಜೆಪಿಯಲ್ಲಿ ಸಿಎಂ ಹುದ್ದೆಗಾಗಿ ರಾಜಕೀಯ: ಎಎಪಿ
ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಜಾತಿಗೆ ಸೇರಿದ ಕೇಂದ್ರ ಕಲ್ಲಿದ್ದಲು ಸಿಚವ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿಯಾಗಬಹುದು ಎಂದು ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ, ಬಿ.ಎಲ್.ಸಂತೋಷ್‌ರವರು ಏಳೆಂಟು ಅಭ್ಯರ್ಥಿಗಳನ್ನು ಬದಲಿಸಿ ಮುಖ್ಯಮಂತ್ರಿ ಆಗಲು ಮುಂದಾಗಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ ಎಂದರು.

ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪ್ರಹ್ಲಾದ್ ಜೋಷಿ ಹಾಗೂ ಬಿ.ಎಲ್.ಸಂತೋಷ್ ನಡುವೆ ಪೈಪೋಟಿಯಿರುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ. ಬೆಂಗಳೂರಿನ ಅಕ್ಕಪಕ್ಕದ ಐದು ಕ್ಷೇತ್ರಗಳಾದ ಜಯನಗರ, ಬಸವನಗುಡಿ, ಚಿಕ್ಕಪೇಟೆ, ರಾಜಾಜಿನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಇದರಿಂದ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಐದು ಕ್ಷೇತ್ರಗಳಲ್ಲಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಗ್ಗೆ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಆದ್ದರಿಂದ ನಾವು ಈ ವಿಷಯವನ್ನು ಜನರ ಮುಂದಿಡುತ್ತಿದ್ದೇವೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.












Click it and Unblock the Notifications