ಬೆಂಗಳೂರಿನ ಈ ಪೊಲೀಸ್ ಠಾಣೆ ಮುಂದಿದ್ದ 134 ಜಪ್ತಿ ವಾಹನಗಳ ತೆರವು; ಹೊಸ ಅಭಿಯಾನಕ್ಕೆ ಕೃಷ್ಣಬೈರೇಗೌಡರಿಂದ ಚಾಲನೆ!
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರ ಸುಗಮ ಸಂಚಾರ ಹಾಗೂ ಪಾದಚಾರಿ ಮಾರ್ಗ ಸುಧಾರಣೆಗೆ ಹಲವು ವಿನೂತನ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಬೆಂಗಳೂರಿನ ಪ್ರಮುಖ ಪೊಲೀಸ್ ಠಾಣೆ ಮುಂದಿದ್ದ 134 ಜಪ್ತಿ ವಾಹನಗಳ ತೆರವು ಮಾಡಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ದೈನಂದಿನ ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಸಹಯೋಗದೊಂದಿಗೆ, ಜಯನಗರ ಪೊಲೀಸ್ ಠಾಣೆಯ ಆವರಣದಲ್ಲಿ ದೀರ್ಘಕಾಲದಿಂದ ಜಪ್ತಿಯಾಗಿ ನಿಂತಿದ್ದ ವಾಹನಗಳನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸುವ ಮಹತ್ವದ ಕಾರ್ಯಾಚರಣೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ಜಯನಗರ ಪೊಲೀಸ್ ಠಾಣೆಯಲ್ಲಿ ಇಂದು ಚಾಲನೆ ನೀಡಿದರು.

ಜಯನಗರ ಠಾಣೆಯಲ್ಲಿದ್ದ ಒಟ್ಟು 134 ವಾಹನಗಳ ತೆರವು
ಕಾನೂನು ಪ್ರಕ್ರಿಯೆ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿದ್ದ ಕಾರಣ ಜಯನಗರ ಪೊಲೀಸ್ ಠಾಣೆಯ ಆವರಣ, ಪಾದಚಾರಿ ಮಾರ್ಗ ಹಾಗೂ ರಸ್ತೆಬದಿಯಲ್ಲೇ ಉಳಿದುಕೊಂಡಿದ್ದ ಒಟ್ಟು 134 ಜಪ್ತಿ ವಾಹನಗಳನ್ನು ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಗುರುತಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು. ಇದರಲ್ಲಿ 117 ದ್ವಿಚಕ್ರ ವಾಹನಗಳು, 07 ಕಾರುಗಳು, 09 ಆಟೋ ರಿಕ್ಷಾಗಳು ಹಾಗೂ 01 ಲಗೇಜ್ ಕ್ಯಾರಿಯರ್ ವಾಹನಗಳನ್ನೂ ಸಚಿವರ ಸೂಚನೆ ಮೇರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಸಾರ್ವಜನಿಕರಿಗೆ ನಿರಾಳತೆ: ಸುಗಮ ಸಂಚಾರಕ್ಕೆ ಹಾದಿ ಸುಗಮ
ಜಯನಗರ ಪೊಲೀಸ್ ಠಾಣೆಯ ಸುತ್ತಮುತ್ತ ಜಪ್ತಿ ವಾಹನಗಳು ರಾಶಿ ಬಿದ್ದಿದ್ದರಿಂದ ಸ್ಥಳೀಯ ನಿವಾಸಿಗಳು ಮತ್ತು ಪಾದಚಾರಿಗಳ ಓಡಾಟಕ್ಕೆ ಭಾರೀ ತೊಂದರೆಯಾಗುತ್ತಿತ್ತು. ಪರಿಸರ ಹಾಳಾಗುವುದರ ಜೊತೆಗೆ ರಸ್ತೆ ಒತ್ತುವರಿಯಾಗಿ ಸಂಚಾರ ದಟ್ಟಣೆಗೂ ಕಾರಣವಾಗುತ್ತಿತ್ತು. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ನಿರಂತರ ಮನವಿಗೆ ಸ್ಪಂದಿಸಿ, ಕಳೆದ ಎರಡು ತಿಂಗಳುಗಳಿಂದ ಸತತ ಸಭೆಗಳು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.
ಮಳೆಯಿಂದಾಗುವ ಸಮಸ್ಯೆ ಸ್ಥಳಗಳನ್ನು ಪರಿಶೀಲಿಸಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸೂಚನೆ
ಇನ್ನು ಬೆಂಗಳೂರು ನಗರದಲ್ಲಿ ನಿನ್ನೆ ಸುರಿದ ಮಳೆಯಿಂದ ನೀರು ನಿಲುಗಡೆ ಸೇರಿದಂತೆ ವಿವಿಧ ಸಮಸ್ಯೆಗಳು, ಅದಕ್ಕೆ ಕೈಗೊಂಡಿರುವ ಪರಿಹಾರಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಗದೀಶ್. ಜಿ ಅವರ ಅಧ್ಯಕ್ಷತೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ಮಳೆನೀರು ನಿಲುಗಡೆ, ಚರಂಡಿ ಹಾಗೂ ನೀರು ಹರಿವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವುದು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಹಾಗೂ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು.
ನೀರು ನಿಲುಗಡೆ ಸಮಸ್ಯೆಗೆ ತಕ್ಷಣದ ಪರಿಹಾರ
ಮಳೆಯಿಂದ ಉಂಟಾಗುವ ನೀರು ನಿಲುಗಡೆ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ನಗರದ ಚರಂಡಿಗಳು ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ಮಾರ್ಗಗಳನ್ನು ನಿರಂತರವಾಗಿ ಪರಿಶೀಲಿಸಿ, ಹೂಳು, ಪ್ಲಾಸ್ಟಿಕ್ ತ್ಯಾಜ್ಯ, ಹಾಗೂ ಇತರೆ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಳೆ ಸಂದರ್ಭದಲ್ಲಿ ನೀರು ಹರಿವಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೀರು ಸರಾಗವಾಗಿ ಹರಿಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಡ್ರೈನೇಜ್ ಜಾಲರಿಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ಕ್ರಮಕ್ಕೆ ಸೂಚನೆ
ಮಳೆ ನೀರು ಹರಿಯುವ ಸ್ಥಳಗಳು ಹಾಗೂ ಡ್ರೈನೇಜ್ ಜಾಲರಿಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ಸಂಗ್ರಹವಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಯಿತು. ತ್ಯಾಜ್ಯದಿಂದ ನೀರು ಹರಿವಿಗೆ ತಡೆಯುಂಟಾಗದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುವಂತೆ ಹಾಗೂ ಸಂಗ್ರಹವಾದ ಕಸ ತ್ಯಾಜ್ಯವನ್ನು ತಕ್ಷವೇ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಧರೆಗುಳಿದ ಮರಗಳನ್ನು ತಕ್ಷಣ ತೆರವುಗೊಳಿಸಲು ಸೂಚನೆ
ಮಳೆಯಿಂದಾಗಿ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಮರಗಳು ಮತ್ತು ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಿ, ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿದ್ದ ಮರಗಳನ್ನು ತೆರವುಗೊಳಿಸಲು ಸೂಚನೆ
ಮಳೆ-ಗಾಳಿಯಿಂದ ಮರ, ರೆಂಬೆ ಕೊಂಬೆಗಳು ಧರೆಗುರುಳುವುದರಿಂದ ಸಾರ್ವಜನಿಕ ಸಂಚಾರ ದಟ್ಟಣೆ ಉಂಟಾಗುವುದರಿಂದ ಕೂಡಲೇ ಬಿದ್ದ ಮರ, ರೆಂಬೆ ಕೊಂಬೆಗಳನ್ನು ತಕ್ಷಣವೇ ತೆರವುಗೊಳಿಸಲು ಹಾಗೂ ಟ್ರಾಫಿಕ್ ಪೊಲೀಸ್ ರವರೊಂದಿಗೆ ಸಮನ್ವಯ ಸಾಧಿಸಲು ತಿಳಿಸಿದರು. ಮುಂಜಾಗೃತ ಕ್ರಮವಾಗಿ ಒಣಗಿದ ರೆಂಬೆ ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಲು ಸೂಚನೆ ನೀಡಿದರು.


Click it and Unblock the Notifications
