'ಬರೀ ನಾಟಕ' ಎಂದ ಬಂಗಾಳಿಯ ಬೆಂಡೆತ್ತಿದ ಕನ್ನಡಿಗರು
ಬೆಂಗಳೂರು, ಸೆ.29: ಸಾಮಾಜಿಕ ಜಾಲ ತಾಣಗಳಲ್ಲಿ ಭಾಷೆ, ದೇಶ, ಪ್ರಾಂತ್ಯಗಳ ನಡುವೆ ಆಗಾಗ ಸಂಘರ್ಷಗಳು ನಡೆಯುವುದು ಮಾಮೂಲಿಯಾಗಿಬಿಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವ ವಲಸಿಗರು ಇಲ್ಲಿನ ಸೌಲಭ್ಯ ಪಡೆದು ಇಲ್ಲಿನವರನ್ನೇ ದೂಷಿಸಿದರೆ ಮಾತ್ರ ಕನ್ನಡಿಗರು ಸಿಡಿದೇಳುತ್ತಾರೆ. ಇಂಥದ್ದೊಂದು ಪ್ರಸಂಗ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ದುರ್ಗಾಪುರ ಮೂಲದ ಬೆಂಗಾಲಿ ಸುಭಬ್ರಾತಾ(ಶುಭವ್ರತ) ಬಸು ಅವರು ಕನ್ನಡ ವಿರೋಧಿ ಹೇಳಿಕೆ ನೀಡಿ ಕನ್ನಡಿಗರ ಕೋಪಕ್ಕೆ ತುತ್ತಾಗಿ ನಂತರ ಕ್ಷಮೆಯಾಚಿಸಿ ಸುಖಾಂತ್ಯ ಕಂಡಿದೆ.
Kar Nataka = Do drama..ಯಾವಾಗಲೂ ಇಲ್ಲಿ ನೀರಿಗಾಗಿ ಮತ್ತೊಂದು ವಿಷಯಕ್ಕಾಗಿ ಪಕ್ಕದ ತಮಿಳುನಾಡು, ಆಂಧ್ರಪ್ರದೇಶದ ಜೊತೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈಗ ಗೋವಾ, ಮಹಾರಾಷ್ಟ್ರ ಜೊತೆ ಕೂಡಾ ಜಗಳ ಶುರುವಾಗಿದೆ. ಇಲ್ಲಿ ಐಟಿ ಕಂಪನಿಗಳು ಇರುವುದೇ ಅದೃಷ್ಟ. ಎಲ್ಲಿ ನೋಡಿದರೂ ವಿದ್ಯುತ್, ಕಸ ನಿರ್ವಹಣೆ, ಹಾಳಾದ ರಸ್ತೆ, ಸಮಸ್ಯೆಗಳ ಆಗರವಾಗಿದೆ. ಅದರೂ ಕ್ಲೀನ್ ಸಿಟಿ ಎಂದು ನಂ.7ಸ್ಥಾನದಲ್ಲಿದೆ ಎಂದು ಫೇಸ್ ಬುಕ್ ಪೋಸ್ಟ್ ಹಾಕಿಕೊಂಡಿದ್ದರು.

ಈ ಫೇಸ್ ಬುಕ್ ಪೋಸ್ಟ್ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.ಕನ್ನಡಾಭಿಮಾನಿಗಳೇ, ಕೆಳಕಂಡ ಮಿಂಚೆಯನ್ನು Microsoft- [email protected],[email protected] ಗೆ ಕಳಿಸಿ, ಹಾಗೆಯೇ ಅವರ ಫೇಸ್ಬುಕ್ ಗೋಡೆಯ ಮೇಲೆ ಹಾಕಿ. ಇದು ನಿಮೆಲ್ಲರ (ನಮ್ಮೆಲ್ಲರ) ಜವಾಬ್ದಾರಿ. ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ, ದಯವಿಟ್ಟು ತಿಳಿಸಿ, ಮತ್ತು ಮಿಂಚಂಚೆಯನ್ನು[e-mail] ಕಳಿಸಿ. ಇವನನ್ನು ಕೆಲಸದಿಂದ ಎತ್ತಂಗಡಿ ಮಾಡುವ ವರೆಗೂ ಪ್ರತಿಭಟನೆ ಮಾಡೋಣ. ಎಂದು ಕನ್ನಡ ಪರ ಗುಂಪುಗಳು ಅಭಿಯಾನ ಆರಂಭಿಸಿದ ಮೇಲೆ ಬೆಂಗಾಲಿ ಬಾಬುಗೆ ಬಿಸಿ ತಟ್ಟಿದೆ.
ಇಮೇಲ್ ಗೂ ಮೈಕ್ರೋಸಾಫ್ಟ್ ಸಂಸ್ಥೆ ಎಚ್ ಆರ್ ಗೆ ಮುಟ್ಟಿತೋ ಇಲ್ಲವೋ ಗೊತ್ತಿಲ್ಲ, ಬೆಂಗಾಲಿ ಬಸು ಈಗ ಫೇಸ್ ಬುಕ್ ನಲ್ಲಿ ಕ್ಷಮೆಯಾಚಿಸಿದ್ದಾರೆ.

ಕರ್ನಾಟಕದ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ ನಾನು ನನ್ನ ಈ ಹಿಂದಿನ ಪೋಸ್ಟ್ ಗೆ ಕ್ಷಮೆಯಾಚಿಸುತ್ತೇನೆ, ಬಂದ್ ನಿಂದಾಗುವ ಪರಿಣಾಮದ ಬಗ್ಗೆ ಬರೆಯುವ ಸ್ವಲ್ಪ ಕಠೋರ ಭಾಷೆ ಬಳಸಿ ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿರಬಹುದು.
ನಾನು ಹಾಗೂ ನನ್ನ ಕುಟುಂಬ ದಶಕಗಳಿಂದ ಇಲ್ಲೇ ನೆಲೆಸಿದ್ದೇವೆ. ನನ್ನ ಮಕ್ಕಳು ಇಲ್ಲಿನ ಉತ್ತಮವಾದ ಶಿಕ್ಷಣ ವ್ಯವಸ್ಥೆಯಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ನಾನು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದೇನೆ ಹಾಗೂ ನಿಮ್ಮಗಳ ಆಕ್ರೋಶದ ಅರಿವಿದೆ. ನೀವು ಬಯಸಿದಂತೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೊಫೈಲ್ ಪಿಕ್ಚರ್ ಅನ್ನು ಕನ್ನಡ ಬಾವುಟಕ್ಕೆ ಬದಲಾಯಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications