ದೇವ್ರಾಣೆಗೂ ಉದ್ಧಾರವಾಗೋಲ್ಲ: ಕೃಷ್ಣ ಬೈರೇಗೌಡ ವ್ಯಥೆ

ಸ್ವಕ್ಷೇತ್ರವಾದ ಬ್ಯಾಟರಾಯನಪುರದಲ್ಲಿ ಬೇಗೂರು ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಯುವ ಶಾಸಕ ಕೃಷ್ಣ ಬೈರೇಗೌಡ ಅವರು ಸ್ಥಳೀಯ ಶಾಸಕ ಮತ್ತು ಸಂಸದರ ನಿಧಿಯಿಂದ ನೀಡುವ ಸವಲತ್ತುಗಳನ್ನು ಜನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಲ್ಲಿ ಸ್ಥಳೀಯ ಸಂಸದರ ನಿಧಿಯಿಂದ ಸೌರ ದೀಪ ಅಳವಡಿಸಲಾಗಿತ್ತು. ಆದರೆ ಈಗ ಅಲ್ಲಿ ದೀಪಗಳೇ ಇಲ್ಲ. ಬ್ಯಾಟರಿ, ಕಂಬ, ಲೈಟು ಬಲ್ಬುಗಳನ್ನು ಕದ್ದೊಯ್ದಿದ್ದಾರೆ. ಹೀಗಾದರೆ ನಿಮ್ಮನ್ನು ಸರಕಾರ ಹಾಗಿರಲಿ, ಆ ಭಗವಂತನೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲ ರಾಜ್ಯದ ವಿವಿಧ ಭಾಗಗಳಲ್ಲಿಯೂ ಇಂತಹುದೇ ಕಂಡುಬರುತ್ತದೆ. ಸರ್ತೆ, ಚರಂಡಿಗೆ ಹಾಕಿರುವ ಕಲ್ಲು, ಚಪ್ಪಡಿಗಳನ್ನೂ ಎತ್ತಿಕೊಂಡು ಹೋಗಿ ತಮ್ಮ ಮನೆಗಳಿಗೆ ಹಾಕಿಕೊಳ್ಳುತ್ತಾರೆ. ಇಷ್ಟೊಂದು ದುರಾಸೆ ಮನುಷ್ಯನಿಗೆ ಬರಬಾರದು ಎಂದು ಸಚಿವ ಕೃಷ್ಣ ಬೈರೇಗೌಡ ಮಾರ್ಮಿಕವಾಗಿ ಹೇಳಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿಎನ್ ಲಕ್ಷ್ಮಯ್ಯ, ಬೆಂಗಳೂರು ಉತ್ತರ ತಾಲೂಕು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ದಿಬ್ಬೂರು ಜಯಣ್ಣ, ದೊಡ್ಡಜಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಶ್ರೀನಿವಾಸಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ ಅಶೋಕನ್, ದಾನೇಗೌಡ, ಶುಭ ನರಸಿಂಹ ಮೂರ್ತಿ ಬೆಂಗಳೂರು ನಗರ ಕೃಷಿಕ್ ಸಮಾಜದ ಅಧ್ಯಕ್ದಷ ಮಂಜುನಾಥ್ ಗೌಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications