ಗೋಮಾಂಸ ಭಕ್ಷಣೆː ಪ್ರೊ ಭಗವಾನ್ ಬಂಧನಕ್ಕೆ ಆಗ್ರಹ
ಮೈಸೂರು/ಬೆಂಗಳೂರು, ಜೂನ್ 30: ಮೈಸೂರಿನ ಕಲಾಮಂದಿರದಲ್ಲಿ ಇತ್ತೀಚೆಗೆ ಗೋಮಾಂಸ ಭಕ್ಷಣೆ ಮಾಡಿದ ಪ್ರೊ ಕೆಎಸ್ ಭಗವಾನ್, ಮಹೇಶ್ ಚಂದ್ರ ಹಾಗೂ ಕೆಎಸ್ ಶಿವರಾಮು ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಆವರಣದಲ್ಲಿ ಗೋಮಾಂಸ ತಿನ್ನುವುದು ಅಪರಾಧ ಎಂದು ಬಿಜೆಪಿ ಯುವಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳು ದೂರಿವೆ. ಪ್ರೊ ಭಗವಾನ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಲಾಗಿದೆ.

'ಮೈಸೂರಿನ ಸರ್ಕಾರಿ ಕಲಾ ಮಂದಿರದಲ್ಲಿ ಜೂನ್ 25ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬುದ್ಧಿಜೀವಿಗಳೆಂದು ಹೇಳಿಕೊಂಡು ತಿರುಗಾಡುವ ಭಗವಾನ್, ಮಹೇಶ್ ಚಂದ್ರಗುರು ಹಾಗೂ ಇತರರು ಗೋಮಾಂಸ ತಿಂದಿದ್ದು, ಬೇರೆಯವರಿಗೂ ಅದನ್ನು ತಿನ್ನುವಂತೆ ಪ್ರಚೋದಿಸಿದ್ದಾರೆ. ಜತೆಗೆ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ' ಎಂದು ಬಿಜೆಪಿಯ ಗೋಸಂರಕ್ಷಕ ಪ್ರಕೋಷ್ಠ ಸಂಚಾಲಕ ಸುಂದರ್ ರಾಜ್ ರೈ ಅವರು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೈಸೂರಿನಲ್ಲಿ ದೂರು: ಪ್ರೊ. ಭಗವಾನ್, ಮಹೇಶ್ ಚಂದ್ರಗುರು ಹಾಗೂ ಕೆಎಸ್ ಶಿವರಾಮು ವಿರುದ್ಧ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ.
ಕಲ್ಯಾಣ ಲಕ್ಷ್ಮಿ ವೆಂಕಟರಮಣ ದೇಗುಲದ ಸ್ಥಾಪಕ, ಬಿಜೆಪಿ ಮುಖಂಡ ಎಚ್ ಜಿ ಗಿರಿಧರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಮೂವರ ವಿರುದ್ಧ ದೂರು ದಾಖಲಿಸಲಾಗಿದ್ದು, ಬಂಧನಕ್ಕೆ ಆಗ್ರಹಿಸಲಾಗಿದೆ. ಇಂಥ ಕಾರ್ಯಕ್ರಮ ಆಯೋಜಿಸಿದ್ದ ಚಾರ್ವಾಕ ಸಂಘಟನೆಯನ್ನು ನಿಷೇಧಕ್ಕೆ ಒಳಪಡಿಸುವಂತೆ ಕೋರಲಾಗಿದೆ ಎಂದರು.












Click it and Unblock the Notifications