ಬೆಕೆಟ್ ನಾಟಕದ ಟ್ರೈಲರ್ ನೋಡಿ, ನಾಟಕಕ್ಕೆ ಹೋಗಿ
ಬೆಂಗಳೂರು, ಸೆ.26: ಬೆಂಗಳೂರು ಥಿಯೇಟರ್ ಕಂಪನಿಯು ತನ್ನ ಹೊಸ ಪ್ರಯೋಗ ಬೆಕೆಟ್ ನಾಟಕದ ಎಂಟನೇ ಪ್ರದರ್ಶನಕ್ಕೆ ಸಿದ್ದವಾಗಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಫ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕ ಪ್ರದರ್ಶನ ಸೆಪ್ಟೆಂಬರ್ 29ರಂದು ಸಂಜೆ ರಂಗಶಂಕರದಲ್ಲಿ ಕಾಣಬಹುದು.
ನಾಟಕ : ಬೆಕೆಟ್
ಫ್ರೆಂಚ್ ಮೂಲ : ಜೂನ್ ಆನ್ವಿ
ವಿನ್ಯಾಸ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ
ಸ್ಥಳ : ರಂಗ ಶಂಕರ
ದಿನಾಂಕ : 29 ಸೆಪ್ಟೆಂಬರ್ 2016, ಸಂಜೆ 7:30
ಟಿಕೆಟ್ ದರ : ರೂ. 100/-
ಸಂಪರ್ಕಿಸಿ : 9900182400
www.bookmyshow.com

2015ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರ ನಿರ್ದೇಶನದ ನಾಟಕ ಚೆರ್ರಿ ಆರ್ಚಡ್ ಪ್ರದರ್ಶನದ ಮೂಲಕ ತನ್ನ ಹುಟ್ಟು ಪಡೆದ ಬೆಂಗಳೂರು ಥಿಯೇಟರ್ ಕಂಪನಿ 'ಚೆರ್ರಿ ತೋಟ' ನಾಟಕದ ಯಶಸ್ವಿ 15 ಪ್ರದರ್ಶನ ನೀಡಿ ಈಗ ಪ್ರಕಾಶ್ ಬೆಳವಾಡಿ ನಿರ್ದೇಶನದ ಫ್ರೆಂಚ್ ಮೂಲದ ಜೂನ್ ಆನ್ವಿಯವರ 'ಬೆಕೆಟ್' ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ. ಬೆಕೆಟ್ ನಾಟಕದ ಮೊದಲ 8 ಪ್ರದರ್ಶನಗಳು ಒಳ್ಳೆಯ ಪ್ರತಿಕ್ರಿಯೆಗಳೊಂದಿಗೆ ಜನ ಮನ್ನಣೆ ಪಡೆದಿದೆ.
ನಾಟಕದ ಬಗ್ಗೆ: ಜಾನ್ ಆನ್ವಿ ರಚಸಿದ ಬೆಕೆಟ್ (ಮೂಲ ಫ್ರೆಂಚ್ ನಾಟಕ) ನಾಟಕದ ಐತಿಹಾಸಿಕ ನೆಲೆ 12ನೆ ಶತಮಾನದ ಇಂಗ್ಲೆಂಡಿನ ನಾರ್ಮನ ಜನಾಂಗದ ದೊರೆ ಎರಡನೆ ಹೆನ್ರಿ ಮತ್ತು ಕ್ಯಾಥೋಲಿಕ್ ಚರ್ಚಿನ ಥಾಮಸ್ ಬೆಕೆಟ್ ನಡುವೆ ಆದ ಸಮರ. (ಆನ್ವಿಯವರು ನಾಟಕ ಬರೆಯುವಾಗ ಮುಂದೆ ಸಂತರೆಂದು ಘೋಷಿತರಾದ ಬೆಕೆಟ್ ಅವರನ್ನು ಸಾಕ್ಸನ್ ಜನಾಂಗದವರೆಂದು ತಪ್ಪಾಗಿ ಗ್ರಹಿಸಿದ್ದರು)ಈ ಕೃತಿಯನ್ನು ಟಿ.ಎಸ್. ಎಲಿಯಟ್ ರಚಿಸಿದ ಕಾವ್ಯ ನಾಟಕವಾದ 'Murder in the Cathedralಗೆ ವಿಮರ್ಶಕರು ಆಗಾಗ ಹೋಲಿಸುವುದು ಉಂಟು.

ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಥನ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ. ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕಥನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ.
ಇಲ್ಲಿಯ ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು - ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ - ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ - ಮಾಡಲು ಸಾಧ್ಯವಿಲ್ಲ ಅನ್ನಿಸುವುದು.
ಆನ್ವಿಯ ಬೆಕೆಟ್, ಪಿ. ಲಂಕೇಶರ 'ಸಂಕ್ರಾಂತಿ'ಯ ಸಾತ್ವಿಕ ಬಸವಣ್ಣನಲ್ಲ. ಗಿರೀಶ್ ಕಾರ್ನಾಡರ 'ತಲೆದಂಡ'ದ ಬಸವಣ್ಣನೂ ಅಲ್ಲ. ಈತ ಪ್ರಾರಂಭಕ್ಕೆ ಮೋಜುಗಾರ, ಸೊಗಸುಗಾರ, ವಿಷಯಲಂಪಟ. ಇಂಥವನು ದೇವರಗೆ ಮುಖಕೊಡಬೇಕು, ಕಣ್ಣಲ್ಲಿ ದೇವರನ್ನು ತುಂಬಿಕೊಂಡು ಎಲ್ಲ ಸಾಮ್ರಾಜ್ಯಗಳಂತೆ "ದೇವರ ಸಾಮ್ರಾಜ್ಯ"ವನ್ನೂ ಕಾಪಾಡಬೇಕು.
ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ
(ಒನ್ ಇಂಡಿಯಾ ಸುದ್ದಿ)












Click it and Unblock the Notifications