ಬೆಂಗಳೂರಲ್ಲಿ ತಂಬಾಕು ನಿಯಂತ್ರಣ ಕಾನೂನು ಜಾರಿಗೆ ಪಾಲಿಕೆಯಿಂದ 'ಜಾಣರಾಗಿರಿ-ದೂರವಿರಿ' ಅಭಿಯಾನ
ಬೆಂಗಳೂರು ಆಗಸ್ಟ್ 24: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿಬಿಎಂಪಿಯು ತಂಬಾಕು ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹಾಗೂ ಆರೋಗ್ಯಯುತ ನಗರವನ್ನಾಗಿಸುವ ಉದ್ದೇಶದಿಂದ 'ವೈಟಲ್ ಸ್ಟ್ರಾಟಜೀಸ್' ಸಹಯೋಗದೊಂದಿಗೆ 'ಜಾಣರಾಗಿರಿ-ದೂರವಿರಿ' (Be Smart - Don't Start) ಎಂಬ 'ವಿದ್ಯಾರ್ಥಿ ಸ್ವಯಂಸೇವ ಅಭಿಯಾನ'ವನ್ನು ಆರಂಭಿಸಿದೆ.
ಬುಧವಾರ ನಗರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ ಕೆ.ವಿ ಅವರು, ನಮ್ಮ ತಂಡವು ತಂಬಾಕು ನಿಯಂತ್ರಣ ಕಾನೂನುಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಪುನರಾವರ್ತಿತ ಅಪರಾಧಿಗಳನ್ನು ನಿಭಾಯಿಸುವ ಅವಶ್ಯಕತೆ ಇದೆ ಎಂದರು.
ಶಾಲಾ ಸುತ್ತಮುತ್ತಲಿನ ಈ ಸಮಸ್ಯೆಯನ್ನು ಪರಿಹರಿಸಲು ನಾವು ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ನೋಂದಾಯಿಸಿಕೊಳ್ಳಬಹುದು. ತಂಬಾಕಿನ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕುರಿತ ಕಾನೂನುಗಳ ಬಗ್ಗೆ ಶಿಕ್ಷಣ ಪಡೆದು ಪುನರಾವರ್ತಿತ ಅಪರಾಧಿಗಳ ಬಗ್ಗೆ ವರದಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.

ತಂಬಾಕು ಬಳಕೆ, ಹಾನಿ ಬಗ್ಗೆ ಜಾಗೃತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯು ಈ ಅಭಿಯಾನ ಮೂಲಕ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ತಂಬಾಕು ಬಳಕೆ ಮತ್ತು ಧೂಮಪಾನದಿಂದಾಗುವ ಹಾನಿ ಕುರಿತು ಅರಿವು ಮೂಡಿಸಲಿದೆ. ವಿದ್ಯಾರ್ಥಿಗಳಿಗೆ ತಂಬಾಕು ನಿಯಂತ್ರಣ, ನಿಷೇಧ ಕುರಿತು ತಿಳಿದುಕೊಳ್ಳಲಿದ್ದಾರೆ. ಇನ್ನು ಬಿಬಿಎಂಪಿಯು ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತ ಮುತ್ತ ತಂಬಾಕು ನಿಯಂತ್ರಣ ಕಾನೂನುಗಳ ಉಲ್ಲಂಘನೆಯನ್ನು ವರದಿ ಮಾಡಲು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಯೋಜನೆ ಇದಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಜತೆ ಆರೋಗ್ಯಾಧಿಕಾರಿ ಸಂವಹನ
ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಮಾತನಾಡಿ, ವಿದ್ಯಾರ್ಥಿ ಸ್ವಯಂಸೇವ ಅಭಿಯಾನ ಬಿಬಿಎಂಪಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸಲು ಪೂರಕವಾಗಿದೆ. ಸ್ವಯಂ ಸೇವಕರಾಗುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಸಂವಹನ ನಡೆಸುತ್ತಾರೆ. ಈ ಅಭಿಯಾನ ಆರೋಗ್ಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಸಂವಹನಕ್ಕೆ ವೇದಿಕೆ ಆಗಲಿದೆ ಎಂದರು.

ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಸೂಚನೆ
ತಂಬಾಕು ನಿಯಂತ್ರಣದ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರ್.ಎಂ.ವಿ ಮಾತನಾಡಿ, ಈ ಅಭಿಯಾನದಲ್ಲಿ ಸಾಧ್ಯವಾದಷ್ಟು ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯದ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಲು ಲಿಂಕ್‌ಗಳನ್ನು ಪೋಸ್ಟರ್‌ಗಳನ್ನು ಶಾಲಾ-ಕಾಲೇಜುಗಳಲ್ಲಿ ಮತ್ತು ತಂಬಾಕು ನಿಯಂತ್ರಣ ಫೇಸ್‌ಬುಕ್ ಪೇಜಿನಲ್ಲಿ ಪ್ರದರ್ಶಿಸಲಾಗಿದೆ.
ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳ ಅಕ್ಕಪಕ್ಕ ಸೇರಿದಂತೆ ನಿತ್ಯ ಹಲವಾರು ಕಡೆಗಳಲ್ಲಿ ಸರ್ಕಾರದ ತಂಬಾಕು ನಿಯಮಗಳ ಉಲ್ಲಂಘನೆ ಆಗುತ್ತಲೆ ಇವೆ. ಅವುಗಳ ಕಡಿವಾಣ ಹಾಕಲಾಗುವುದು. ಯಾರಾದರೂ ವಿದ್ಯಾರ್ಥಿಗಳು ಈ ಲಿಂಕ್ ಅಥವಾ ಫೇಸ್‌ಬುಕ್ ಪೇಜ್ ಮೂಲಕ ನೋಂದಾಯಿತರಾದರೆ ಅವರಿಗೆ ತಂಬಾಕು ನಿಯಮ ಉಲ್ಲಂಘನೆ ಕುರಿತ ವರದಿ ಮಾಡುವ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಇದೆ
ವೈಟಲ್ ಸ್ಟ್ರಾಟಜೀಸ್ ಸಂಸ್ಥೆಯ ಯೋಜನಾ ನಿರ್ದೇಶಕಿ ಡಾ. ತ್ರಿವೇಣಿ ಬಿ.ಎಸ್ ಅವರು, ಇಂತಹ ಉತ್ತಮ ಅಭಿಯಾನಕ್ಕಾಗಿ ನಾವು ಬಿಬಿಎಂಪಿ ಜತೆ ಕೈ ಜೋಡಿಸಿರುವುದಕ್ಕೆ ಹರ್ಷವಾಗುತ್ತಿದೆ. ತಂಬಾಕು ನಿಯಂತ್ರಣ ಕಾನೂನುಗಳ ಕಟ್ಟುನಿಟ್ಟಿನ ಜಾರಿಗೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಒಳಗೊಳ್ಳುವಿಕೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ ಮಧ್ಯೆ ಒಡನಾಟ ಗಟ್ಟಿಯಾಗುತ್ತದೆ.
ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಕೋಟ್ಪಾ 2003ರ ಕಾಯಿದೆ' ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವತ್ತ ಗಮನಹರಿಸಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications