ಕೆಂಪೇಗೌಡ ಬಡಾವಣೆ ತ್ವರಿವತವಾಗಿ ಮೂಲ ಸೌಕರ್ಯ: ಎಸ್.ಆರ್.ವಿಶ್ವನಾಥ್
ಬೆಂಗಳೂರು, ಜೂ. 02: ಕೆಂಪೇಗೌಡ ಬಡಾವಣೆ ನಿವೇಶನ ಖರೀದಿದಾರರಿಗೆ ಬಿಡಿಎ ಸಂತಸದ ಸುದ್ದಿ ನೀಡಿದೆ. ಕೆಂಪೇಗೌಡ ಬಡಾವಣೆಯಲ್ಲಿ ತ್ವರಿತವಾಗಿ ಮನೆ ಕಟ್ಟಲು ಅಗತ್ಯ ಇರುವ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಭರವಸೆ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಒದಗಿಸಲಾದ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಪರಿವೀಕ್ಷಣೆ ನಡೆಸಿತು. ಪರೀವಿಕ್ಷಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಸ್. ಆರ್. ವಿಶ್ವನಾಥ್, ಕೋವಿಡ್-19 ಸಾಂಕ್ರಾಮಿಕ ಮತ್ತು ಇನ್ನಿತರೆ ತಾಂತ್ರಿಕ ಕಾರಣಗಳಿಂದಾಗಿ ಬಡಾವಣೆಯ ಕಾಮಗಾರಿಗಳು ಕಳೆದ ಮೂರು ವರ್ಷಗಳಿಂದ ಕುಂಠಿತಗೊಂಡಿದ್ದವು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದರು.
ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನದಾರರು ಮನೆ ಕಟ್ಟಲು ಮುಂದೆ ಬಂದರೆ, ತಕ್ಷಣವೇ ಅದಕ್ಕೆ ಅಗತ್ಯವಿರುವ ನೀರು, ವಿದ್ಯುತ್ ಮತ್ತು ಕಚ್ಚಾರಸ್ತೆಯ ವ್ಯವಸ್ಥೆಯನ್ನು ಕಲ್ಪಿಸಲು ಬಿಡಿಎ ಬದ್ಧವಾಗಿದೆ. ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸುಮಾರು 59 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಮನೆ ನಿರ್ಮಾಣಕ್ಕೆ ಮುಂದಾಗುವ ನಿವೇಶನದಾರರಿಗೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ಅತ್ಯಾಧುನಿಕವಾದ ತಡಗೋಡೆ ನಿರ್ಮಾಣ
ಬಿಡಿಎ ಆಯುಕ್ತ ರಾಜೇಶ್ ಗೌಡ ಮಾತನಾಡಿ, ಕನ್ನಳ್ಳಿ ಕೆರೆಯ ಸನಿಹದಲ್ಲಿರುವ ನಿವೇಶನಗಳಲ್ಲಿ ತಲೆದೋರಿರುವ ತೇವಾಂಶ ಸಮಸ್ಯೆಯನ್ನು ಬಾಂಬೆ ಐಐಟಿ ತಜ್ಞರು ಪರಿಹರಿಸಲಿದ್ದಾರೆ. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 12 ಮೀಟರ್ ಗೂ ಹೆಚ್ಚು ಆಳದಿಂದ ಅತ್ಯಾಧುನಿಕವಾದ ತಡಗೋಡೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಪಕ್ಕದ ನಿವೇಶನಗಳಿಗೆ ತೇವಾಂಶ ಬರುವುದು ತಡೆಯುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಾಮನಿ ಅವರು, "ನಿವೇಶನದಾರರಿಗೆ ತ್ವರಿತವಾಗಿ ಮನೆ ನಿರ್ಮಾಣ ಮಾಡಲು ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು," ಎಂದು ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿಧಾನಸೌಧದಲ್ಲಿ ಸಭೆ ನಡೆಸಿ ಪರಿವೀಕ್ಷಣೆಗೆ ತೆರಳಿದರು.

ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಚಂದ್ರಶೇಖರ ಮಾಮನಿ ನೇತೃತ್ವದಲ್ಲಿ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎಂ.ಪಿ. ಅಪ್ಪಚ್ಚುರಂಜನ್, ರಮೇಶ್ ಭೂಸನೂರು, ಅಮೃತ ಅಯ್ಯಪ್ಪ ದೇಸಾಯಿ, ಉಮಾನಾಥ್ ಕೋಟ್ಯಾನ್ ಹಾಗೂ ವೀರಭದ್ರಯ್ಯ ಸೇರಿದಂತೆ ಸಮಿತಿಯ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್, ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡವು ಕೆಂಪೇಗೌಡ ಬಡಾವಣೆಯ ಕೊಡಿಗೇಹಳ್ಳಿ, ಕನ್ನಳ್ಳಿ, ಅರ್ಚಕರ ಬಡಾವಣೆ, ಕಡಬಗೆರೆ ಸೇರಿದಂತೆ ಮೊದಲಾದ ಬ್ಲಾಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿವೇಶನದಾರರಿಂದ ಅಹವಾಲು ಸ್ವೀಕರಿಸಿತು.












Click it and Unblock the Notifications