ಭೂ ಮಾಲೀಕರಿಗೆ ಟಿಡಿಆರ್ ಪ್ರಮಾಣ ಪತ್ರ; ಬಿಡಿಎಗೆ ಹೈಕೋರ್ಟ್ ತರಾಟೆ
ಬಿಡಿಎ ಆದೇಶವನ್ನು ಸುಮ್ಮನೆ ಓದಿದರೆ ಅದು ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು, ಮಾರ್ಚ್ 16; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇನ್ನೂ ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ಸರ್ಟಿಫಿಕೇಟ್ ನೀಡದ ಕ್ರಮ ಪ್ರಶ್ನಿಸಿ, ಕೂಡಲೇ ಟಿಡಿಆರ್ ನೀಡುವಂತೆ ಆದೇಶ ನೀಡಿದೆ. ಬೆಂಗಳೂರಿನ ಮಾರೇನಹಳ್ಳಿಯ ಜಯಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಅಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಬುಧವಾರ ಅರ್ಜಿಯ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಬಿಡಿಎ ಆದೇಶವನ್ನು ಸುಮ್ಮನೆ ಓದಿದರೆ ಅದು ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಖಾರವಾದ ಮಾತುಗಳಲ್ಲಿ ಹೇಳಿದೆ. ಮಾರೇನಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆ ಬಿಡಿಎ ಅರ್ಜಿದಾರರ ಭೂಮಿಯನ್ನು ಪಡೆದಿತ್ತು. ಅದಕ್ಕೆ ಪರ್ಯಾಯವಾಗಿ ಟಿಡಿಆರ್ ಸರ್ಟಿಫಿಕೇಟ್ ನೀಡುವುದಾಗಿ ಅರ್ಜಿದಾರರಿಗೆ ಭರವಸೆ ನೀಡಿತ್ತು. ಅದರಂತೆ ಅರ್ಜಿದಾರರು ತಮ್ಮ ಜಾಗವನ್ನು ಬಿಟ್ಟುಕೊಟ್ಟು ನಂತರ ನಿಯಮದಂತೆ ಟಿಡಿಆರ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು.

ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅರ್ಜಿದಾರರ ಜಾಗದ ದಾಖಲೆಗಳು ಸರಿ ಇಲ್ಲ ಎಂದು ನಿರಾಕರಿಸಿತ್ತು. ಆದರೆ ಅರ್ಜಿದಾರರು ನಿಯಮದಂತೆ ತಮ್ಮ ಬಳಿ ಜಾಗದ ಹಕ್ಕುಪತ್ರ ಇದೆ, ಆದರೂ ಬಿಡಿಎ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸಿರುವುದು ಕಾನೂನು ಬಾಹಿರ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಕೋರ್ಟ್ ಆದೇಶ ಏನು?; ಬಿಡಿಎ ತಾನು ನೀಡಿದ್ದ ಭರವಸೆಯಂತೆ ಟಿಡಿಆರ್ ನೀಡಲಾಗುವುದಿಲ್ಲವೆಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್‌ಗಳನ್ನು ವಿತರಿಸುವಂತೆ ಬಿಡಿಎಗೆ ಆದೇಶ ನೀಡಿರುವ ಹೈಕೋರ್ಟ್, ಮೂರು ತಿಂಗಳಲ್ಲಿ ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ರಿಜಿಸ್ಟ್ರಾರ್ ಜನರಲ್‌ಗೆ ವರದಿ ನೀಡುವಂತೆ ನಿರ್ದೇಶನ ನೀಡಿದೆ.

ಒಂದು ವೇಳೆ ಕೋರ್ಟ್ ಆದೇಶ ಪಾಲನೆ ವಿಳಂಬವಾದರೆ ಬಿಡಿಎ ಅಯುಕ್ತರು ಪ್ರತಿದಿನಕ್ಕೆ 1 ಸಾವಿರ ರೂ.ಗಳಂತೆ ಅರ್ಜಿದಾರರಿಗೆ ದಂಡ ಪಾವತಿಸಬೇಕು ಮತ್ತು ಆ ದಂಡದ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಯಿಂದ ನಿಯಮದ ಪ್ರಕಾರ ವಸೂಲು ಮಾಡಬೇಕು ಎಂದೂ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಒಂದು ವೇಳೆ ಸರ್ಕಾರ ನಿಯಮಗಳನ್ನು ಪಾಲಿಸದೆ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ವ್ಯಕ್ತಿಯ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಮತ್ತು ಟಿಡಿಆರ್ ಸೌಕರ್ಯ ನಿರಾಕರಿಸಿದರೆ ಅದು ಅವೈಜ್ಞಾನಿಕವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಬಿಡಿಎ ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸುವುದನ್ನು ಸಮರ್ಥಿಸಿಕೊಂಡಿಲ್ಲ. ಟಿಡಿಆರ್ ನಿರಾಕರಣೆ ವಾಸ್ತವವಾಗಿ ಅರ್ಜಿದಾರರಲ್ಲಿ ಹಣ ನೀಡಿ ಜಾಗದ ಹಕ್ಕು ಪತ್ರ ಪಡೆದಿದ್ದರೂ ಅವರು ಪರಿಹಾರ ಪಾವತಿಗೆ ಅರ್ಹರಲ್ಲ ಎಂದು ಹೇಳಿದಂತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications