ಅತಿಕ್ರಮಣವಾಗಿದ್ದ ₹30 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ, ನಕಲಿ NOC ಇದ್ದರೆ ಕ್ರಿಮಿನಲ್ ಕೇಸ್
ಬೆಂಗಳೂರು, ನವೆಂಬರ್ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೂ ಒತ್ತುವರಿದಾರರ ವಿರುದ್ಧ ಮತ್ತೆ ಜೆಸಿಬಿ ಆರ್ಭಟಿಸಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಹೃದಯಭಾಗದಲ್ಲಿ 30 ಕೋಟಿ ರೂಪಾಯಿ ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆದಿದೆ.
ಇಷ್ಟ ಅಲ್ಲದೇ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷರು ಆಗಿರುವ ಶಾಸಕ ಎಸ್.ಆರ್.ವಿಶ್ವನಾಥ್ ಪರಿಶೀಲಿಸಿದರು. ಜಾಗಗಳ ನಕಲಿ ಎನ್ಒಸಿ ಇಟ್ಟುಕೊಂಡು ಜಾಗ ಒತ್ತುವರಿ ಮಾಡಿಕೊಂಡರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಭೂ ಒತ್ತುವರಿದಾರರ ವಿರುದ್ಧದ ದಾಳಿ ಮುಂದುವರಿಸಿರುವ ಬಿಡಿಎ ಮಂಗಳವಾರ ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ 22 ಗುಂಟೆ ಜಾಗದ ಮೇಲೆ ದಾಳಿ ನಡೆಸಿತು. ಪ್ರಸ್ತುತ ಈ ಜಾಗವು ಬಿಡಿಎಗೆ ಸೇರಿದ್ದಾಗಿದೆ. ಆದರೆ ಅತಿಕ್ರಮಣದಾರರು ಸದರಿ ಜಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಒತ್ತುವರಿ ಜಾಗದಲ್ಲಿದ್ದ 6 ಶೆಡ್ ತೆರವು
ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರ ಆದೇಶದ ಮೇರೆಗೆ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಪೊಲೀಸ್ ಅಧಿಕಾರಿಗಳಾದ ರವಿಕುಮಾರ್, ಶ್ರೀನಿವಾಸ್ ಹಾಗೂ ಎಂಜಿನಿಯರ್ ಅಶೋಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ 22 ಗುಂಟೆ ಜಾಗದ ಮೇಲೆ ನಿರ್ಮಿಸಲಾಗಿದ್ದ 6 ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಲಾಯಿತು. ಈ ಮೂಲಕ ಒಟ್ಟು ಸುಮಾರು 30ಕೋಟಿ ರು.ಮೌಲ್ಯದ ಆಸ್ತಿಯನ್ನು ಬಿಡಿಎ ವಶಕ್ಕೆ ಪಡೆಯಿತು.
ಈ ಘಟನೆ ಹಿಂದೆಯೇ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸದರಿ ಜಾಗ ಸೇರಿದಂತೆ ನಗರದಲ್ಲಿ ಒತ್ತುವರಿಯಾದ ಇನ್ನಿತರ ಬಿಡಿಎ ಆಸ್ತಿಗಳು ಇರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಸರ್ಕಾರಿ ಜಾಗ ಕಬ್ಜವಾಗಿದ್ದರೆ ಕೂಡಲೇ ಪುನಃ ವಶಕ್ಕೆ ಪಡೆದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇಂದು ಅದರಂತೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ನಕಲಿ ಎನ್ಒಸಿ ಇದ್ದರೆ ಕ್ರಿಮಿನಲ್ ಕೇಸ್: ಅಧ್ಯಕ್ಷರ ಎಚ್ಚರಿಕೆ
ಜಾಗ ತೆರವು ಬಗ್ಗೆ ಪ್ರತಿಕ್ರಿಯಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಈ ಹಿಂದೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಣದಾಸೆಗೆ ಬಿದ್ದು ಪ್ರಭಾವಿಗಳು ಮತ್ತು ಭೂ ಕಬಳಿಕೆದಾರರಿಗೆ ನಕಲಿ ಎನ್ಒಸಿಗಳನ್ನು ಕೊಟ್ಟು ಬಿಡಿಎ ಜಾಗವನ್ನು ಅತಿಕ್ರಮಣವಾಗುವಂತೆ ಮಾಡಿದ್ದರು.
ಇದೀಗ ಇಂತಹ ನಕಲಿ ಎನ್ಒಸಿ ಪ್ರಕರಣಗಳನ್ನು ಬಯಲಿಗೆ ತರಲಾಗುತ್ತಿದೆ. ನಕಳಿ ದಾಖಲೆ ಕಂಡು ಬಂಧಲ್ಲಿ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ತಪ್ಪು ಮಾಡಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ನಕಲಿ ಎನ್ಒಸಿ ಬಳಸಿಕೊಂಡು ಬಿಡಿಎ ಜಾಗವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಭೂ ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ನಕಲಿ ದಾಖಲೆವುಳ್ಳ ಬಿಡಿಎ ಜಾಗ ಬಿಟ್ಟು ಕೊಡಿ
ಹೀಗೆ ನಕಲಿ ಎನ್ಒಸಿ ಅಥವಾ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬಿಡಿಎ ಜಾಗದ ಮೇಲೆ ಹಿಡಿತ ಸಾಧಿಸುತ್ತಿರುವವರು ಕೂಡಲೇ ಅಂತಹ ದಾಖಲೆಗಳನ್ನು ನೀಡಿ ಬಿಡಿಎ ಜಾಗವನ್ನು ಬಿಟ್ಟುಕೊಡಬೇಕು. ಈಗಾಗಲೇ ನಕಲಿ ಎನ್‌ಒಸಿ ಪರಿಶೀಲನೆ, ಒತ್ತುವರಿ ಜಾಗ ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ನಕಲಿ ಎನ್‌ಒಸಿ, ಭೂಮಿ ಅತಿಕ್ರಮಣ ಕಂಡು ಬಂದರೆ ಕಾನೂನು ರೀತಿಯಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ವಿಶ್ವನಾಥ್ ತಿಳಿಸಿದರು.

ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ
ಒಂದು ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ಜಾಗದಲ್ಲಿ ಹಿಡಿತ ಸಾಧಿಸುತ್ತಿರುವವರ ಭೂ ಕಬಳಿಕೆದಾರರ ಬಗ್ಗೆ ಮಾಹಿತಿ ಇಲ್ಲವೇ ದಾಖಲೆಗಳಿದ್ದರೆ ಸಾರ್ವಜನಿಕರು ತಿಳಿಸಬೇಕು. ಬಿಡಿಎ ಅಧ್ಯಕ್ಷರು, ಆಯುಕ್ತರು ಮತ್ತು ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬೇಕೆಂದು ಎಂದು ಎಸ್.ಆರ್.ವಿಶ್ವನಾಥ್ ಮನವಿ ಮಾಡಿದರು. ಹೀಗೆ ಮಾಹಿತಿ ನೀಡುವ ಸಾರ್ವಜನಿಕ ಹೆಸರು ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು. ಜೊತೆಗೆ ಸೂಕ್ತವಾಗಿ ತನಿಖೆ ನಡೆಸಿ ಜಾಗ ಒತ್ತುವರಿದಾರರ ಪಾಲಾಗದಂತೆ ನೋಡಿಕೊಳ್ಳಬಹುದು. ಅಲ್ಲದೇ ಜಾಗ ವಶಕ್ಕೆ ಪಡೆದು ಸಾರ್ವಜನಿಕರಿಗೆ ಹಂಚಲಾಗುವುದು ಎಂದು ತಿಳಿಸಿದರು.












Click it and Unblock the Notifications