BDA: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಭೂ ಮಾಲೀಕರಿಗೆ ರಿಲೀಫ್
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಹತ್ವದ ಯೋಜನೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಚುರುಕುಗೊಳಿಸಲು ಮುಂದಾಗಿದೆ. ಭೂ ಸ್ವಾಧೀನದ ವಿಚಾರಕ್ಕೆ ಯೋಜನೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಮಹತ್ವದ ತೀರ್ಮಾನವೊಂದನ್ನು ಮಾಡಿದೆ. ಸುಮಾರು 27,000 ಕೋಟಿ ರೂ.ಗಳ 73 ಕಿ. ಮೀ. ಉದ್ದದ ರಸ್ತೆ ಯೋಜನೆ ಇದಾಗಿದೆ.
ದಶಕಗಳ ಹಿಂದಿನ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮರು ನಾಮಕರಣ ಮಾಡಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಹೆಸರಿನಲ್ಲಿ ಜಾರಿಗೊಳಿಸುತ್ತಿದೆ. ಸ್ವತಃ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಯೋಜನೆಯನ್ನು ಜಾರಿಗೊಳಿಸಲು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಯೋಜನೆಗೆ ಟೆಂಡರ್ ಕರೆಯುವ ಮೊದಲುಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ತಿಗಳ ಮಾಲೀಕರ ಜೊತೆ ಸಭೆ ನಡೆಸಿ ಭೂ ಸ್ವಾಧೀನ ಪೂರ್ಣಗೊಳಿಸಲು ಸರ್ಕಾರ ಬಯಸಿದೆ. ಅದಕ್ಕಾಗಿ ಬಿಡಿಎ 9 ವಿಶೇಷ ಭೂ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿದೆ.
ವಿಶೇಷ ಸಮಿತಿ ರಚನೆ: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ವ್ಯಾಪ್ತಿಗೆ ಒಳಪಡುವ ಆಸ್ತಿಗಳ ಮಾಲೀಕರು ಪರಿಹಾರ ಸೇರಿದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡಿ ಯೋಜನೆ ವಿಳಂಬ ಮಾಡುವುದನ್ನು ತಪ್ಪಿಸಲು ಸರ್ಕಾರ ವಿಶೇಷ ಸಮಿತಿಯೊಂದನ್ನು ರಚನೆ ಮಾಡಿದೆ. ಭೂ ಸ್ವಾಧೀನ ವಿಚಾರದಲ್ಲಿ ಆಗುವ ತೊಂದರೆಗಳನ್ನು ಬಗೆಹರಿಸಲು ಈ ಸಮಿತಿ ರಚನೆ ಮಾಡಲಾಗಿದೆ.
ಈ ಸಮಿತಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರು. ಬಿಡಿಎ ಆಯುಕ್ತರು, ಕಾನೂನು, ಹಣಕಾಸು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ. 73 ಕಿ. ಮೀ. ಉದ್ದದ ರಸ್ತೆ ಯೋಜನೆಗೆ 2,560 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಈ ರಸ್ತೆ ತುಮಕೂರು ರಸ್ತೆ ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ.
ಹಳೆ ಮದ್ರಾಸ್ ರಸ್ತೆ, ತುಮಕೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಮೂಲಕ ಈ ಕಾರಿಡಾರ್ ಸಾಗುತ್ತದೆ. ಈ ಕಾರಿಡಾರ್ ಸಾಗುವ ಮಾರ್ಗದಲ್ಲಿ ಬರುವ ಕೃಷಿ ಜಮೀನುಗಳು ಮಾಲೀಕರು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಹೆಚ್ಚಿನ ಪರಿಹಾರ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಬಿಡಿಎ ಮುಂದಿಟ್ಟಿರುವ ಪರಿಹಾರ ಪ್ಯಾಕೇಜ್‌ಗೆ ರೈತರು ಒಪ್ಪಿಗೆ ನೀಡುತ್ತಿಲ್ಲ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯ ಜಾರಿಗಾಗಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಆಂತರಿಕ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಈ ಸಮಿತಿ ಜೊತೆ ಸರ್ಕಾರ ರಚನೆ ಮಾಡಿರುವ ಹೊಸ ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ. ಕೆಲವು ದಿನಗಳ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ. ಕೆ. ಶಿವಕುಮಾರ್ ಬಿಡಿಎ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಿಬಿಸಿ ಯೋಜನೆಯ ಭೂ ಸ್ವಾಧೀನದ ಕುರಿತು ಮಾಹಿತಿ ಪಡೆದಿದ್ದರು.
ಬಿಡಿಎ ಅಧಿಕಾರಿಗಳ ಮಾಹಿತಿ ಪ್ರಕಾರ ರೈತರು ಬೇಡಿಕೆ ಇಡುತ್ತಿರುವ ಪರಿಹಾರ ಅತಿ ಹೆಚ್ಚು. ಇದಕ್ಕೆ ಒಪ್ಪಿದರೆ ಬಿಬಿಸಿ ಯೋಜನೆಯ ವೆಚ್ಚ ಇನ್ನೂ ಅಧಿಕವಾಗಲಿದೆ. ಆದ್ದರಿಂದ ರೈತರ ಮನವೊಲಿಕೆ ಮಾಡಿ, ಯೋಜನೆಯನ್ನು ಜಾರಿಗೊಳಿಸಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 2007ರಲ್ಲಿಯೇ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆ ಪ್ರಸ್ತಾವನೆ ತಯಾರು ಮಾಡಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಯೋಜನೆ ಜಾರಿಗೆ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಈಗ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಆರ್‌ಆರ್ ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಮರು ನಾಮಕಾರಣ ಮಾಡಿ ಜಾರಿಗೊಳಿಸಲು ಒಪ್ಪಿಗೆ ಕೊಡಲಾಗಿದೆ. ಯೋಜನೆಗೆ ಹುಡ್ಕೋ ಆರ್ಥಿಕ ನೆರವು ನೀಡಲಿದೆ.












Click it and Unblock the Notifications