Water Crisis: ಪೂರ್ವ ಮುಂಗಾರು ಎದುರಿಸಲು ಸಿದ್ಧವಾಗುತ್ತಿದೆ ಬಿಬಿಎಂಪಿ, ಕ್ರಮಗಳ ವಿವರ
ಬೆಂಗಳೂರು, ಮಾರ್ಚ್ 18: ಸಿಲಿಕಾನ್ ಸಿಟಿ ಬೆಂಗಳೂರು ಸದ್ಯ ನೀರಿನ ಅಭಾವ ವಿಚಾರವಾಗಿ ಸುದ್ದಿಯಲ್ಲಿದೆ. ನೀರಿನ ಕೊರತೆ ಸೃಷ್ಟಿಯಾದ ನಂತರ ಪರಿಹಾರ ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿಯು ಇದೀಗ ಪೂರ್ವ ಮುಂಗಾರು ಮಳೆ ಸಿದ್ಧತೆ ಆರಂಭಿಸಿದೆ.
ಹೌದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪೂರ್ವ ಮುಂಗಾರು ಸಿದ್ದತೆ ಆರಂಭಿಸವ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚುನಾವಣೆ ತಯಾರಿ ಕುರಿತು ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಅವರು, ಪೂರ್ವ ಮುಂಗಾರು ಮಳೆ ಪ್ರಾರಂಭಕ್ಕೂ ಮುಂಚುತವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ವ್ಯಾಪ್ತಿಯಲ್ಲಿ ಕೂಡಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೂಗೊಳ್ಳುವಂತೆ ಸೂಚಿಸಿದರು.
ಪ್ರವಾಹವಾಗದಂತೆ ಎಚ್ಚರಿಕೆ ವಹಿಸಿ
ವಲಯ ವ್ಯಾಪ್ತಿಯಲ್ಲಿ ಈಗಲೇ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿ ಸದರಿ ಪ್ರದೇಶಗಳಲ್ಲಿ ಪ್ರವಾಹವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತಿ ಸರಗವಾಗಿ ನೀರು ಹರಿದುಹೋಗುವಂತೆ ಮಾಡಬೇಕು. ಅಲ್ಲದೇ ರಸ್ತೆ ಬದಿಯ ಡ್ರೈನ್ ಗಳು ಸ್ವಚ್ಛವಾಗಿರುವಂತೆ ನೋಡಿಕೊಂಡು ರಸ್ತೆ ಮೇಲೆ ಬಿದ್ದಂತಹ ನೀರು ಸರಾಗವಾಗಿ ಹೋಗುವಂತೆ ಮಾಡಬೇಕೆಂದು ನಿರ್ದೇಶಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಆಯಾ ವಲಯ ವ್ಯಾಪ್ತಿಯಲ್ಲಿ ಜಲಮಂಡಳಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದರು.
ಬಿಬಿಎಂಪಿ ಪೊರ್ಟಲ್‌ನಲ್ಲಿ ಸ್ವಯಂ ನೋಂದಣಿ ಆಗಿರುವ ಟ್ಯಾಂಕರ್ ಗಳನ್ನು ಈಗಾಗಲೇ ವಲಯವಾರು ನಿಯೋಜನೆ ಮಾಡಲಾಗಿದೆ. ನೀರು ಸಮಸ್ಯೆಯಿರುವ ಪ್ರದೇಶಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಪಾಲಿಕೆ ವ್ಯಾಪ್ತಿಗೆ ಬರುವ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಲಮಂಡಳಿ ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆಗೆ ನೀರಿನ ಸಂಬಂಧ ಬರುವ ದೂರುಗಳನ್ನು ಕಾಲಮಿತಿಯೊಳಗಾಗಿ ಇತ್ಯರ್ಥಪಡಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆ: ಬ್ಯಾನರ್, ಫ್ಲೆಕ್ಸ್ ತೆರವಿಗೆ ಸೂಚನೆ
ಲೋಕಸಭಾ ಚುನಾವಣೆಗೆ ಹಿನ್ನೆಲೆ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಎಲ್ಲಿಯೂ ಜನಪ್ರತಿನಿಧಿಗಳಿರುವ ಜಾಹೀರಾತುಗಳು ಇಲ್ಲದಂತೆ ನೋಡಿಕೊಳ್ಳಬೇಕು. ಆಯಾ ವಲಯಗಳಲ್ಲಿ ಎಲ್ಲಾ ಪೋಸ್ಟರ್, ಬ್ಯಾನರ್ ಗಳಿದ್ದರೆ ಕೂಡಲೆ ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಸಾರ್ವಜನಿಕ ಸ್ಥಳ, ಬಸ್ ತಂಗುದಾಣಗಳಲ್ಲಿ ಅಳವಡಿಸಿರುವಂತಹ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ಕಾಣದಂತೆ ಮುಚ್ಚಬೇಕು. ಇನ್ನು ಗೋಡೆಗಳ ಮೇಲೆ ಬರೆದಿರುವಂತಹ ಬರಹಗಳನ್ನು ಕೂಡಲೆ ತೆರವುಗೊಳಿಸಬೇಕು. ಗೋಡೆಗಳ ಮೇಲೆ ಅಂಟಿಸಿರುವಂತೆ ಬಿತ್ತಿಪತ್ರಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರೋಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ವಲಯ ಮುಖ್ಯ ಅಭಿಯಂತರರು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications