BBMP Elections: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 225ಕ್ಕೆ ನಿಗದಿ: ರಾಜ್ಯ ಸರ್ಕಾರ ಆದೇಶ
ಮಹತ್ವದ ಬೆಳವಣಿಗೆಯಲ್ಲಿ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 243 ವಾರ್ಡ್‌ಗಳನ್ನಾಗಿ ವಿಂಗಡನೆ ಮಾಡಿತ್ತು.
29-01-2021ರಲ್ಲಿ ಬಿಜೆಪಿ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದ್ದು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಹೊರಡಿಸಿದ ಪತ್ರದಲ್ಲಿ ತಿಳಿಸಲಾಗಿದೆ.

ಬಿಜೆಪಿ ಸರ್ಕಾರದ ಅಧಿಸೂಚನೆ ಹಿಂಪಡೆಯುವ ಮೂಲಕ ಕಾಂಗ್ರೆಸ್ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧವಾಗಿದೆ. 12 ವಾರಗಳ ಒಳಗಾಗಿ ವಾರ್ಡ್ ವಿಂಗಡನೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ನಂತರ ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡುವ ಸಾಧ್ಯತೆ ಇದೆ. ನಾವು ಚುನಾವಣೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ವಾರ್ಡ್ ಮರುವಿಂಗಡಣೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಬಿಎಂಪಿ ಚುನಾವಣೆಗೆ ಹಿಡಿದ ಗ್ರಹಣ ಬಿಡಿಸುವ ಲೆಕ್ಕಾಚಾರದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಲೋಕಸಭಾ ಚುನಾವಣೆ ಮುನ್ನ, ಅಂದರೆ ಈ ವರ್ಷದ ಅಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನಲೆ ವಾರ್ಡ್ ಸಂಖ್ಯೆ ನಿಗದಿಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ವಾರ್ಡ್ ಮರು ವಿಂಗಡನೆ ಬಗ್ಗೆ ಸಾಕಷ್ಟು ಟೀಕೆ ಗ್ರಾಸವಾಗಿತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ಬಿಜೆಪಿ ಸರ್ಕಾರ ಮಾಡಿದ ವಾರ್ಡ್ ವಿಂಗಡನೆಯಲ್ಲಿ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಹಳೆ ವಾರ್ಡ್ ವಿಂಗಡನೆ ರದ್ದು ಮಾಡಿ ಮತ್ತೆ ಹೊಸದಾಗಿ ವಾರ್ಡ್‌ಗಳನ್ನು ವಿಂಗಡನೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.
ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶದಂತೆ ಹೊಸದಾಗಿ ವಾರ್ಡ್ ವಿಂಗಡನೆ ಮಾಡಲು ಸಮಿತಿ ರಚಿಸಿ, ಸಮಿತಿಗೆ ವರದಿ ನೀಡುವಂತೆ ಸೂಚನೆ ನೀಡಿತ್ತು. ಸದ್ಯ ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ 243 ವಾರ್ಡಗಳನ್ನು ಈಗ 225 ವಾರ್ಡ್‌ಗಳಿಗೆ ನಿಗದಿ ಮಾಡಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ವಾರ್ಡ್‌ಗಳನ್ನು ಜನಸಂಖ್ಯೆ ಆಧಾರವಾಗಿಟ್ಟುಕೊಂಡು ವಾರ್ಡ್‌ಗಳ ಮರುವಿಂಗಡಣೆ ಮಾಡಿ 198 ವಾರ್ಡಗಳನ್ನು 243 ವಾರ್ಡ್‌ಗಳಿಗೆ ಹೆಚ್ಚಿಸಿತ್ತು. ಬಿಜೆಪಿ ಶಾಸಕರು ಇರೋ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎನ್ನುವ ಆರೋಪ ಇತ್ತು. ಬಿಜೆಪಿ ನಾಯಕರು ತಮ್ಮಗೆ ಬೇಕದ ರೀತಿಯಾಲ್ಲಿ ವಾರ್ಡ್ ಮರುವಿಂಗಡಣೆ ಮಾಡಿಕೊಂಡಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ವಾರ್ಡ್ ಮರು ವಿಂಗಡನೆ ಮಾಡಲಾಗಿದೆ ಎಂದೂ ಆರೋಪಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈಗ 243 ಇದ್ದ ವಾರ್ಡ್‌ಗಳ ಸಂಖ್ಯೆತನ್ನು 225ಕ್ಕೆ ಇಳಿಸಲಾಗಿದೆ. ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಚುನಾವಣೆಗೆ ತಯಾರಿ ಕೂಡ ಮಾಡಿಕೊಳ್ಳುತ್ತಿದೆ.
ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಬೆಂಗಳೂರು ನಗರದ ಉಸ್ತುವಾರಿಯಾಗಿರೋ ಡಿ.ಕೆ ಶಿವಕುಮಾರ್ ಗೆ ಈ ಬಾರಿ ಪಾಲಿಕೆ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ತರುವ ಗುರಿ ಹೊಂದಿರುವ ಅವರು, ಈಗಾಗಲೇ ನಗರದ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.











Click it and Unblock the Notifications