ಪೌರ ಕಾರ್ಮಿಕರು, ಅಗತ್ಯ ಸೇವೆಗಾಗಿ ರಸ್ತೆಗಿಳಿದ ಕೆಎಸ್ಆರ್‌ಟಿಸಿ ಬಸ್
ಬೆಂಗಳೂರು, ಏಪ್ರಿಲ್ 13 : ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಬೆಂಗಳೂರು ನಗರದ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಕೆಲಸ ಮಾಡುತ್ತಲೇ ಇದ್ದಾರೆ. ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಎಸ್‌ಟಿಡಿಸಿ ಬಸ್, ಕೆಎಸ್ಆರ್‌ಟಿಸಿ ಬಸ್‌ಗಳನ್ನು ಪೌರ ಕಾರ್ಮಿಕರಿಗಾಗಿ ಬಳಕೆ ಮಾಡುತ್ತಿದೆ. ನಗರದಲ್ಲಿ ತುರ್ತು ಸಂದರ್ಭದಲ್ಲಿ ಬಸ್ ಸೇವೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಅಲ್ಲಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ. ಆಸ್ಪತ್ರೆಗೆ ಸಾಗುವವರು ಯಾವುದೇ ವಾಹನ ಇಲ್ಲವಾದಲ್ಲಿ ಬಸ್ ಮೂಲಕ ಸಂಚಾರ ನಡೆಸಬಹುದು. ಪೌರ ಕಾರ್ಮಿಕರು ಕೆಎಸ್‌ಟಿಡಿಸಿ ಬಸ್‌ಗಳನ್ನು ಬಳಕೆ ಮಾಡಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದಾರೆ.

ಯಲಹಂಕ ವಲಯದಲ್ಲಿ ಮೊದಲು ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿತ್ತು. ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಿಬಿಎಂಪಿ ಕಾಳಜಿ ವಹಿಸಿದೆ. ಇದಕ್ಕಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಹೇಳಿದ್ದಾರೆ.
ಅಲ್ಲದೆ ಅಗತ್ಯ ತುರ್ತು ಸೇವೆಗಳಿಗೆ ನಗರದ ಕೆಎಸ್ಆರ್‌ಟಿಸಿ ಬಸ್ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇಂದು ಚಾಮರಾಜಪೇಟೆ ವಿಭಾಗದ ಮಾಗಡಿ ರಸ್ತೆಯಿಂದ ಕೆ. ಆರ್. ಮಾರುಕಟ್ಟೆ, ಸುಮನಹಳ್ಳಿ ಜಂಕ್ಷನ್‌ನಿಂದ ಲಗ್ಗೆರೆ ತನಕ ಬಸ್ ಸೇವೆ ಆರಂಭಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮನೆಯಿಲ್ಲದೆ ವಾಸಿಸುತ್ತಿರುವ ಬಡವರ್ಗದ ಜನರು, ರಸ್ತೆ ಬದಿಯಲ್ಲಿರುವ ಭಿಕ್ಷುಕರು, ನಿರಾಶ್ರಿತರನ್ನು ಪಾಲಿಕೆ ನಿಯೋಜಿಸಿರುವ ಸಿಬ್ಬಂದಿ ಹಾಗೂ ಮಾರ್ಷಲ್‌ಗಳು ವಿಚಾರಣೆ ನಡೆಸಿ ಕೆಎಸ್‌ಟಿಡಿಸಿ ವಾಹನಗಳಲ್ಲಿ ಆಯ್ದ ಹಾಸ್ಟೆಲ್‌ಗಳಿಗೆ ಕರೆದಂತು ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.












Click it and Unblock the Notifications