ಜಯಮಹಲ್ ರಸ್ತೆ ಅಗಲೀಕರಣ, 52 ಮರಗಳ ಸ್ಥಳಾಂತರ
ಬೆಂಗಳೂರು, ಸೆಪ್ಟೆಂಬರ್ 14 : ಜಯಮಹಲ್ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೊದಲ ಹಂತದಲ್ಲಿ 52 ಮರಗಳನ್ನು ಸ್ಥಳಾಂತರ ಮಾಡಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ರಸ್ತೆ ಅಗಲೀಕರಣ ಮಾಡಬೇಕು ಎಂದು ಹೈಕೋರ್ಟ್ ಗಡುವು ನೀಡಿದೆ.
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸೇತುವೆಯಿಂದ ಮೇಖ್ರಿ ವೃತ್ತದ ವರೆಗಿನ 2.5 ಕಿ.ಮೀ.ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತದೆ. 2009ರಲ್ಲಿ ಇದರ ಕಾಮಗಾರಿ ಆರಂಭವಾದರೂ ಮರಗಳ ಸ್ಥಳಾಂಂತರದ ಸಮಸ್ಯೆಯಿಂದಾಗಿ ಅಗಲೀಕರಣ ಸಾಧ್ಯವಾಗಿರಲಿಲ್ಲ.

ಈ ರಸ್ತೆ ಅಗಲೀಕರಣಕ್ಕೆ 112 ಮರಗಳನ್ನು ಸ್ಥಳಾಂತರ ಮಾಡಬೇಕು ಎಂದು ಯೋಜನೆ ರೂಪಿಸಲಾಗಿದೆ. ಕರ್ನಾಟಕ ಹೈಕೋರ್ಟ್ 2017ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದೆ. ಆದ್ದರಿಂದ, ಬಿಬಿಎಂಪಿ ಮೊದಲ ಹಂತದಲ್ಲಿ 52 ಮರಗಳ ಸ್ಥಳಾಂತರಕ್ಕೆ ಮುಂದಾಗಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಎಲ್ಲಾ ಮರಗಳನ್ನು ಸ್ಥಳಾಂತರ ಮಾಡುತ್ತೇವೆ. ಅಗಲೀಕರಣದ ವೇಳೆ ತೆಗೆಯುವ ಮರಗಳನ್ನು ಅರಮನೆ ಮೈದಾನ ಅಥವ ಅದೇ ರಸ್ತೆಯ ಫುಟ್‌ಪಾತ್ ಮೇಲೆ ನೆಡಲು ನಿರ್ಧರಿಸಲಾಗಿದೆ. ಅರಮನೆ ಮೈದಾನದಲ್ಲಿ ಮರಗಳನ್ನು ನೆಡಲು ಅನುಮತಿಯೂ ಸಿಕ್ಕಿದೆ' ಎಂದು ಹೇಳಿದ್ದಾರೆ.
ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. 38,400 ಚ.ಮೀ.ಜಾಗವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಗರೋತ್ಥಾನ ಯೋಜನೆಯಡಿ 6 ಕೋಟಿ ರೂ. ಅನುದಾನವನ್ನು ರಸ್ತೆ ಅಗಲೀಕರಣಕ್ಕೆ ನೀಡಲಾಗಿದೆ.












Click it and Unblock the Notifications