10 ಕೆಂಪೇಗೌಡ ಗೋಪುರ ನಿರ್ಮಾಣ ಏಕೆ?
ಬೆಂಗಳೂರು, ಮೇ 15 : ಬೆಂಗಳೂರು ನಗರವನ್ನು ಅಭಿವೃದ್ಧಿ ಮಾಡುವ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮತ್ತೊಂದು ನಿರ್ಧಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹೊರ ಭಾಗಗಳಿಂದ ಬೆಂಗಳೂರನ್ನು ಸಂಪರ್ಕಿಸುವ 10 ಪ್ರಮುಖ ರಸ್ತೆಗಳಲ್ಲಿ ಕೆಂಪೇಗೌಡ ಗೋಪುರ ನಿರ್ಮಿಸುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.
ಬಿಬಿಎಂಪಿಯ ಆರ್ಥಿಕ ಪರಿಸ್ಥತಿ ಹೇಗಿದೆ ಎಂಬುದು ಸದ್ಯ ಬೆಂಗಳೂರಿನ ಪ್ರತಿಯೊಬ್ಬ ನಾಗರೀಕರಿಗೂ ತಿಳಿದಿದೆ. ಇಂತಹ ಸಮಯದಲ್ಲಿ ಬಿಬಿಎಂಪಿ ಸುಮಾರು 10 ಕೋಟಿ ರೂ. ವೆಚ್ಚಲಲ್ಲಿ ಬೆಂಗಳೂರಿನ 10 ಕಡೆ ಕೆಂಪೇಗೌಡ ಗೋಪುರ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿದೆ. ಸಮಾಧಾನದ ಸಂಗತಿ ಎಂದರೆ ಇದರ ನಿರ್ಮಾಣ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳು ವಹಿಸಿಕೊಂಡಿವೆ. ಆದರೆ, ಗೋಪುರ ಏಕೆ ಬೇಕು ಎಂಬ ಬಗ್ಗೆ ಬಿಬಿಎಂಪಿ ಬಳಿ ಉತ್ತರವಿಲ್ಲ.

ಹೊರಭಾಗಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ 10 ಪ್ರಮುಖ ರಸ್ತೆಗಳಲ್ಲಿ ಈ ಗೋಪುರ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಇವುಗಳಲ್ಲಿ ಆರು ಕಡೆ ನೈಸ್ ಸಂಸ್ಥೆ ಗೋಪುರ ನಿರ್ಮಿಸಿದರೆ, ಪ್ರೆಸ್ಟೀಜ್, ಶೋಭಾ ಡೆವಲಪರ್ಸ್, ಸ್ಟ್ಯಾಂಡರ್ಸ್ ಪ್ರಾಪರ್ಟಿಸ್ ಸಂಸ್ಥೆ ಗಳು ಗೋಪುರ ನಿರ್ಮಾಣ ಮಾಡುವುದಾಗಿ ಹೇಳಿವೆ. [ನಗರದ ಕಸ ವಿಲೇವಾರಿಗೆ 15 ದಿನ ಗಡುವು]
ಎಲ್ಲಿ ನಿರ್ಮಾಣವಾಗಲಿದೆ ಗೋಪುರ : ಮೈಸೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ (ನೈಸ್ ಸಂಸ್ಥೆ), ಹಳೆ ಮದ್ರಾಸ್ ರಸ್ತೆ (ಪ್ರೆಸ್ಟೀಜ್ ಸಂಸ್ಥೆ), ಬಳ್ಳಾರಿ ರಸ್ತೆ (ಶೋಭಾ ಡೆವಲಪರ್ಸ್ ಸಂಸ್ಥೆ), ಸರ್ಜಾಪುರ ರಸ್ತೆ (ಸ್ಟ್ಯಾಂಡರ್ಸ್ ಪ್ರಾಪರ್ಟಿಸ್) ಮತ್ತು ದೊಡ್ಡಬಳ್ಳಾಪುರ ರಸ್ತೆಯಲ್ಲಿ ಉದ್ದೇಶಿತ ಗೋಪುರಗಳು ನಿರ್ಮಾಣವಾಗಲಿವೆ.
ಸದ್ಯ ನಗರದೊಳಗಿರುವ ಪಾರಂಪರಿಕ ಕಟ್ಟಡ ಮತ್ತು ಗೋಪುರವನ್ನು ಪಾಲಿಕೆ ಹೇಗೆ ನಿರ್ವಹಣೆ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸದ್ಯ ಪಾಲಿಕೆ ಈ ಗೋಪುರಗಳನ್ನು ಏಕೆ ನಿರ್ಮಾಣ ಮಾಡುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವಾಗ ಈ ನಿರ್ಧಾರವೇಕೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿನ ನಗರವಾಸಿಗಳಿಗೆ ಮೂಲಸೌಲಭ್ಯ ಒದಗಿಸಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ನಗರದಲ್ಲಿ ಸ್ವಚ್ಛತೆ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲಾಗದಂತಹ ಸ್ಥಿತಿ ಇದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ, ಈ ದುಂದುವೆಚ್ಚವೇಕೆ?












Click it and Unblock the Notifications