ಬೆಂಗಳೂರು ಯಡಿಯೂರು ಕೆರೆಯ ಕಲ್ಯಾಣಿಗೆ ಬಂತು ಜೀವ ಕಳೆ
ಬೆಂಗಳೂರು, ಸೆಪ್ಟಂಬರ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಕ್ಷಿಣ ವಲಯ ಪದ್ಮನಾಭ ನಗರ ವ್ಯಾಪ್ತಿಯಲ್ಲಿ ಬರುವ ಯಡಿಯೂರು ಕೆರೆ ವಿಸರ್ಜನಾ ಕೊಳ (ಕಲ್ಯಾಣಿ)ಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಮೂಲಕ ಗೌರಿ ಗಣೇಶ ಹಬ್ಬದ ವೇಳೆ ಕೆರೆಯ ಕೊಳಕ್ಕೆ ನೀರು ಹರಿಸಲಾಗುತ್ತಿದೆ. ಅಲ್ಲದೇ ಗಣೇಶ ವಿಸರ್ಜನೆ ಬಗ್ಗೆ ಪಾಲಿಕೆ ಆಯುಕ್ತರು ಒಂದಷ್ಟು ಸೂಚನೆಗಲನ್ನು ಸಹ ನೀಡಿದ್ದಾರೆ.
ನಗರದ ಯಡಿಯೂರು ಕರೆಯ ವಿಸರ್ಜನಾ ಕೊಳದಲ್ಲಿ ನೀರು ತುಂಬಿಸಲು ಶುಕ್ರವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು. ಈ ಕೊಳದಲ್ಲಿ 2023ರಲ್ಲಿ 11 ದಿನಗಳ ಅವಧಿಯಲ್ಲಿ ಅಂದಾಜು 1,75,000 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿತ್ತು. ಈ ಬಾರಿ 7ನೇ ಸೆಪ್ಟೆಂಬರ್ 2024 ರಿಂದ 17ನೇ ಸೆಪ್ಟೆಂಬರ್ 2024ರವರೆಗೆ 11 ದಿನಗಳ ಅವಧಿಯವರೆಗೆ ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮೊದಲ 3 ಮೂರು ದಿನಗಳ ಕಾಲ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಯಾಗಲಿವೆ. ವಿಸರ್ಜನಾ ಕೊಳ ಬಹುತೇಕ ಭರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ 10ನೇ ಸೆಪ್ಟೆಂಬರ್ 2024 ರಂದು ಶುಚಿತ್ವ ಕಾರ್ಯದ ನಿಮಿತ್ತ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ. 11 ರಿಂದ 17ನೇ ತಾರೀಖಿನವರೆಗೆ ಮಾತ್ರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಅಗತ್ಯ ಸೌಲಭ್ಯಗಳ ವ್ಯವಸ್ಥೆಗೆ ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿದೆ.
ಇನ್ನೂ 18ನೇ ಸೆಪ್ಟೆಂಬರ್ 2024 ರಿಂದ ಸದರಿ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಪದ್ಮನಾಭ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ಪಿಓಪಿ ಗಣೇಶ ಮೂರ್ತಿ ವಿಸರ್ಜನೆಗೆ ನಿಷೇಧ
ಯಡಿಯೂರು ಕೆರೆ ವಿಸರ್ಜನಾ ಕೊಳದಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ವಿರ್ಜನೆ ಮಾಡಲು ಅವಕಾಶ ನೀಡಲಾಗುವುದು. ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡುವುದಿಲ್ಲ.

ನೀರು ಹರಿಸುವ ವೇಳೆ ಪದ್ಮನಾಭ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಬನಶಂಕರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಇನ್ನಿತರು ಉಪಸ್ಥಿತರಿದ್ದರು.
ಗಣೇಶ ಮೂರ್ತಿ ವಿಸರ್ಜನೆಗಾಗಿ ಸಂಚಾರಿ ವಾಹನ (ಮೊಬೈಲ್ ಟ್ಯಾಂಕ್)
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು 63 ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು, 462 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್ ಸೈಟ್‌ಗೆ https://apps.bbmpgov.in/ganesh2024/ ಗೆ ಭೇಟಿ ನೀಡಬಹುದು.












Click it and Unblock the Notifications