ವೈಟ್‌ಟಾಪಿಂಗ್ ಮಾಡದ್ದರಿಂದ ಬಿಬಿಎಂಪಿಗೆ 38ಕೋಟಿ ರೂ. ನಷ್ಟ ಸಾಧ್ಯತೆ
ಬೆಂಗಳೂರು, ನವೆಂಬರ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಆರು ಪ್ಯಾಕೇಜ್‌ನಡಿ 89 ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಮಾಡದ ಹಿನ್ನಲೆಯಲ್ಲಿ ಒಪ್ಪಂದದಂತೆ 38 ಕೋಟಿ ನಷ್ಟ ಎದುರಿಸಬೇಕಾದ ಸ್ಥಿತಿ ತಲುಪಿದೆ.
ರಾಜ್ಯದಲ್ಲಿ 2019 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವು ವೈಟ್ ಟಾಪಿಂಗ್ ಕಾಮಗಾರಿಗೆ ಅನುಮೋದನೆ ನೀಡಿತ್ತು. ಅದರಂತೆ ಒಟ್ಟು 1,154 ಕೋಟಿ ರೂ. ಹಣದಲ್ಲಿ ಆರು ಹಂತಗಳಲ್ಲಿ ನಗರದ 89 ರಸ್ತೆಗಳು ಮುಂದಿನ ದಿನಗಳು ಡಾಂಬರಿಗೆ ಬದಲಾಗಿ ಕಾಂಕ್ರೀಟ್ ರಸ್ತೆಗಳಾಗಿ ಬದಲಿಸಲು ನಿರ್ಧರಿಸಲಾಗಿತ್ತು.
ಈ ಸಂಬಂಧ ಬಿಬಿಎಂಪಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಿಬಿಎಂಪಿ ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಆದೇಶ ನೀಡಿದ್ದಲ್ಲದೇ ಮೂವರಿಗೆ ಕಾಮಗಾರಿಯ ಒಪ್ಪಿಗೆ ಪತ್ರ ನೀಡಿತ್ತು. ಒಟ್ಟು ನಾಲ್ಕು ಗುತ್ತಿಗೆದಾರರ ಪೈಕಿ ಮೂರಕ್ಕೆ ಅನುಮೋದನೆ ದೊರೆತಿದೆ.
ಒಂದು ಅನುಮೋದನೆ ಬಾಕಿ ಇತ್ತು. ಇದೇ ವೇಳೆ ಮೈತ್ರಿ ಸರ್ಕಾರ ಪತಗೊಂಡ ಬಳಿಕ ಅಸ್ತಿತ್ವಕ್ಕೆ ಬಂದ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಕ್ರಮಗಳನ್ನು ನೆಪವಾಗಿಟ್ಟುಕೊಂಡು ಹಲವು ಯೋಜನೆಗೆ ತಡೆ ನೀಡಿತ್ತು.
ಉದ್ದೇಶಿತ ವೈಟ್‌ಟಾಪಿಂಗ್ 89 ರಸ್ತೆಗಳಲ್ಲಿ ಬಹುತೇಕವು ಬಿಜೆಪಿಯೇತರ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವೆ. ಈ ಕಾರಣದಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿಲ್ಲ.

1,450 ಕೋಟಿ ರೂ.ವೆಚ್ಚದಲ್ಲಿ 39 ರಸ್ತೆ ವೈಟ್‌ಟಾಪಿಂಗ್
ಇದೇ ವರ್ಷ ಕಳೆದ ಅಕ್ಟೋಬರ್ ಅಂತ್ಯಕ್ಕೆ ಬಿಬಿಎಂಪಿ 1,450 ಕೋಟಿ ರೂ. ವೆಚ್ಚದಲ್ಲಿ 39 ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲು ನಗರಾಭಿವೃದ್ಧಿ ಇಲಾಖೆ (ಯುಡಿಡಿ)ಯ ಅನುಮತಿ ಕೇಳಿತ್ತು. ಜೊತೆಗೆ ಯೋಜನೆಗಳ ಹಳೆಯ ಟೆಂಡರ್‌ಗಳನ್ನು ರದ್ದುಗೊಳಿಸಲು ಶಿಫಾರಸು ಮಾಡಿತ್ತು.
ಹಳೆ ಟೆಂಡರ್ ರದ್ದಿಗೆ ಕಾನೂನು ತೊಡಕಿವೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ವಕೀಲ ಮಾರ್ಗದರ್ಶನದಲ್ಲಿ ಪತ್ರ ಬರೆದಿದ್ದಾರೆ. ಈ ತೊಡಕು ನಿವಾರಣೆ ಆಗದಿದ್ದರೆ ಒಪ್ಪಂದದಂತೆ ಬಿಬಿಎಂಪಿ 38ಕೋಟಿ ರೂ. ಆರ್ಥಿಕ ನಷ್ಟ ಎದುರಿಸಲಿದೆ.

38.34 ಕೋಟಿ ರೂ. ನಷ್ಟ ಸಾಧ್ಯತೆ
ಹಿಂದಿನ ಟೆಂಡರ್‌ಗಳನ್ನು ರದ್ದುಗೊಳಿಸುವ ಕಾನೂನು ತೊಡಕಿನಲ್ಲಿ ಸುಮಾರು 38.34 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಗುತ್ತಿಗೆದಾರರು ಓವರ್‌ಹೆಡ್‌ಗಳು, ಯಂತ್ರ ಮತ್ತು ಮಾನವಶಕ್ತಿಯ ನಷ್ಟ, ನಿರೀಕ್ಷಿತ ಟೆಂಡರ್ ಸಾಮರ್ಥ್ಯದ ತಡೆ ಇತ್ಯಾದಿಗಳನ್ನು ಉಲ್ಲೇಖಿಸಿ ರೂ. 38.34 ಕೋಟಿ ಪರಿಹಾರಕ್ಕೆ ಇಲ್ಲವೇ ಒಪ್ಪಂದದಂತೆ ಶೇ. 10ರಷ್ಟು ಹಣಕ್ಕೆ ಕ್ಲೈಮ್ ಮಾಡಿಕೊಳ್ಳಬಹುದು.

ರೂ. 320 ಕೋಟಿಯ ಹಲವು ಯೋಜನೆಗಳು
ಲೆಕ್ಕಾಚಾರದ ಪ್ರಕಾರ, ಪ್ಯಾಕೇಜ್ 2-ಜೆಎಸ್‌ಪಿ ಯೋಜನೆಗಳು ಮತ್ತು ಪ್ಯಾಕೇಜ್ 5- ಆರ್‌ಪಿಎನ್ ಇನ್‌ಫ್ರಾಟೆಕ್ ಕೆಲಸದ ಆದೇಶಗಳನ್ನು ರೂ. 320 ಕೋಟಿ ನೀಡಲಾಗಿದೆ. ಅದರ ಲಾಭ-ನಷ್ಟ (ಶೇ. 10) ಮತ್ತು ಬಡ್ಡಿಯಾಗಿ ರೂ. 35.29 ಕೋಟಿ ಪಡೆಯಬಹುದು.
ಪ್ಯಾಕೇಜ್ 3-ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಪ್ಯಾಕೇಜ್ 6- ಆರ್‌ಪಿಪಿ ಇನ್‌ಫ್ರಾ ಪ್ರಾಜೆಕ್ಟ್‌ಗಳು ಜೊತೆಗೆ ಪ್ಯಾಕೇಜ್ 2 ಮತ್ತು ಪ್ಯಾಕೇಜ್ 5 ಅವರು 2019 ರಲ್ಲಿ ಪಾವತಿಸಿದ ರೂ 35.12 ಕೋಟಿ ಭದ್ರತಾ ಠೇವಣಿಯ ಮೇಲೆ ಬಡ್ಡಿಯಾಗಿ ರೂ 3.05 ಕೋಟಿಯನ್ನು ಈಗಾಗಲೇ ಕಂಪನಿಗಳು ಪಡೆದಿವೆ.

ಹಳೆಯ ಟೆಂಡರ್‌ನಲ್ಲಿನ ಹಲವು ರಸ್ತೆಗೆ ಡಾಂಬರು
ನಗರಾಭಿವೃದ್ಧಿ ಇಲಾಖೆಗೆ ಒಟ್ಟು 11 ಪುಟಗಳಲ್ಲಿ ಪತ್ರ ಬರೆಯಲಾಗಿದೆ. ಬಿಬಿಎಂಪಿ ಹಿಂದಿನ ಟೆಂಡರ್‌ಗಳನ್ನು ಮುಂದುವರಿಸದೆ ಬಿಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿಯು 287.61 ಕೋಟಿ ರೂ.ಗಳನ್ನು ಉಳಿಸಲಿದೆ ಎಂದು ಹೇಳಲಾಗಿದೆ.
ಯೋಜನಾ ವೆಚ್ಚದಲ್ಲಿ ಶೇ. 5ರಷ್ಟು ವೆಚ್ಚ ಹೆಚ್ಚಳ ಆಗಿದ್ದರ ಜೊತೆಗೆ ಜಿಎಸ್‌ಟಿಯು ಒಳಗೊಂಡಿದೆ. ಇನ್ನು ಹಳೆಯ ಟೆಂಡರ್ ಭಾಗವಾಗಿ ಕೆಲವೆಡೆ ಬಿಬಿಎಂಪಿ ರಸ್ತೆಗಳ ಡಾಂಬರೀಕಣ ಮಾಡಿದೆ.












Click it and Unblock the Notifications