ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು
ಬೆಂಗಳೂರು, ಜೂ. 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಗ್ಗಂಟಾದ ಕಸದ ಸಮಸ್ಯೆಯನ್ನು ಬಗೆಹರಿಸಲು ವಿದೇಶಗಳ ನೆರವು ಕೋರಲು ಚಿಂತನೆ ನಡೆಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮತ್ತು ದುಬೈ ದೇಶಗಳ ನೆರವು ಪಡೆಯಲು ಬಿಬಿಎಂಪಿ ಪ್ರಯತ್ನ ಆರಂಭಿಸಿದೆ. ಅಗತ್ಯವಿದ್ದರೆ ವಿದೇಶಗಳ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬಿಬಿಎಂಪಿ 2013ರ ಡಿಸೆಂಬರ್ ತಿಂಗಳಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಸಹಕಾರದಲ್ಲಿ ಕಸ ವಿಲೇವಾರಿ ಮತ್ತು ಮರು ಬಳಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಸದ್ಯ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಿಗಡಾಯಿಸಿರುವುದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಈ ಕುರಿತು ಅವರಿಗೆ ಮಾಹಿತಿ ನೀಡಿದ್ದು, ದಿನಾಂಕ ಮಾತ್ರ ನಿಗದಿಯಾಗಿಲ್ಲ. [ಬೆಂಗಳೂರಿನ ಸೂತ್ರ ಹಿಡಿದವರು ಮಂಡೂರಲ್ಲಿ ವಾಸ್ತವ್ಯ ಹೂಡಲಿ]

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಕಚೇರಿ ಜೊತೆ ನಾವು ಈ ಮೇಲ್ ಮೂಲಕ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ನಾವು ವಿಡಿಯೋ ಕಾನ್ಫರೆನ್ಸ್ ಮೂಲಕ ಅವರೊಂದಿಗೆ ಮಾತುಕತೆ ನಡೆಲಿದ್ದೇವೆ ಎಂದು ತಿಳಿಸಿದ್ದಾರೆ. [ಮಂಡೂರು: ಪ್ರಾಣ ಕೊಟ್ಟೇವು, ಕಸ ಹಾಕಲು ಬಿಡೆವು]
ಸ್ಯಾನ್ ಫ್ರಾನ್ಸಿಸ್ಕೋ ದೇಶದವರು ವಿವರಿಸುವ ಕಸ ವಿಲೇವಾರಿ ತಂತ್ರಜ್ಞಾನವನ್ನು ಬೆಂಗಳೂರಿಗೆ ಉಪಯೋಗವಾಗುತ್ತದೆ ಅನ್ನಿಸಿದರೆ ನಾನು ಮತ್ತು ಹಿರಿಯ ಅಧಿಕಾರಿಗಳು ಸ್ಯಾನ್ ಫ್ರಾನ್ಸಿಸ್ಕೋ ಪ್ರವಾಸ ಕೈಗೊಂಡು ಅವುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲಿದ್ದೇವೆ ಎಂದು ಮೇಯರ್ ಹೇಳಿದ್ದಾರೆ. [ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ವಿದೇಶಿ ತಜ್ಞರು]
ಕೇವಲ ಸ್ಯಾನ್ ಫ್ರಾನ್ಸಿಸ್ಕೋ ಮಾತ್ರವಲ್ಲದೇ ದುಬೈಗೂ ಮೇಯರ್ ಮತ್ತು ಇತರ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ದುಬೈಅನ್ನು ಜಿರೋ ವೇಸ್ಟ್ ಸಿಟಿ ಮಾಡಲಾಗಿದ್ದು, ಕಸ ವಿಲೇವಾರಿ ವಿಚಾರದಲ್ಲಿ ಅವರು ಉತ್ತಮ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಅವರ ಜೊತೆ ಬುಧವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದರು.
ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಗರದಲ್ಲಿ ಕಸ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸುವುದು ಬಿಟ್ಟು ಮೇಯರ್ ಮತ್ತು ಇತರ ಅಧಿಕಾರಿಗಳು ಕಸ ಸಮಸ್ಯೆ ಬಗೆಹರಿಸುವ ಹೆಸರಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.












Click it and Unblock the Notifications