ಬೆಂಗಳೂರಲ್ಲಿ ಇನ್ಮುಂದೆ "ಕಸ" ಬಿಸಾಕುವ ಮುಂಚೆ ಈ ನಿಯಮ ಪಾಲಿಸಲೇಬೇಕು: ಬಿಬಿಎಂಪಿ
ಬೆಂಗಳೂರಿನಲ್ಲಿ ಕಸದ ವಿಲೇವಾರಿ ಎನ್ನುವುದು ಬಹುದೊಡ್ಡ ಸಮಸ್ಯೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ)ಯು ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಲ್ಲೇ ಇದೆಯಾದರೂ ಕೆಲವರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಡ್ತಿಲ್ಲ. ಪಾಲಿಕೆಯ ಕೆಲವು ಕಸ ಸಂಗ್ರಹಕಾರರು ಸಹ ಮಿಕ್ಸ್ ಮಾಡಿ ಕಸ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಇದೆ. ಇದೀಗ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಸ ವಿಲೇವಾರಿಯ ಬಗ್ಗೆ ಸ್ಟ್ರಾಂಟ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಹಾಗೂ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗುರುವಾರ ವರ್ಚ್ಯುವಲ್ ಕಾನ್ಫರೆನ್ಸ್ ನಡೆಸಿರುವ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿಯೂ ಸ್ವಚ್ಛತಾ ಅಭಿಯಾನವನ್ನು ಕೈಗೊಂಡು ಪುಲ್ ಕ್ಲೀನ್ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನಗರದ ರಸ್ತೆ ಬದಿ ಕಸ ಬಿಸಾಡುವುದನ್ನು ತಪ್ಪಿಸಬೇಕು. ರಸ್ತೆ ಬದಿ ಕಸ ಬಿಸಾಡದೆ ಮನೆಗಳ ಬಳಿ ಬರುವ ಆಟೋಟಿಪ್ಪರ್‌ಗಳಿಗೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ, ಕೊಡುವಂತೆ ಜನರಿಗೆ ಹೇಳಬೇಕು.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಹಸಿ ಕಸ ಹಾಗೂ ಒಣಕಸವನ್ನು ಮಿಶ್ರಣ ಮಾಡಿಕೊಟ್ಟರೆ ತೆಗೆದುಕೊಳ್ಳಬಾರದು. ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿಯೇ ನೀಡುವಂತೆ ಜನರಿಗೆ ಹೇಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ, ಇನ್ಮುಂದೆ ಅಪ್ಪಿ ತಪ್ಪಿಯೂ ಒಣ ಕಸ ಹಾಗೂ ಹಸಿಕಸವನ್ನು ಮಿಕ್ಸ್ ಮಾಡಿ ಕೊಡುವಂತಿಲ್ಲ.
ಸ್ವಚ್ಛತೆ ಜಾಗೃತಿ ಮೂಡಿಸಿ: ಬೆಂಗಳೂರಿನಲ್ಲಿ ಹಸಿ ಕಸ, ಒಣ ಕಸ ಬೇರೆ ಬೇರೆ ಕೊಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಈ ರೀತಿ ಕಸ ಎಸೆಯುವವರು ಕಂಡರೆ ಕೂಡಲೇ ತಡೆಯಿರಿ. ಹಸಿ ಕಸ ಹಾಗೂ ಒಣಕಸವನ್ನು ಪ್ರತ್ಯೇಕ ಮಾಡಿ ಕೊಡುವುದು ಸೇರಿದಂತೆ ಸ್ವಚ್ಛತಾ ಕೆಲಸಕ್ಕೆ ಲಿಂಕ್ ವರ್ಕರ್ಸ್‌ಗಳು ಮನೆ ಮನೆ ಭೇಟಿ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಕಸ ಎಲ್ಲೆಂದರಲ್ಲಿ ಕಾಣಿಸಿಕೊಳ್ಳಬಾರದು ಎಂದು ವಾರ್ನ್ ಮಾಡಿದ್ದಾರೆ.

ಮೊದ್ಲು ಕಚೇರಿ ಸ್ವಚ್ಛವಾಗಿರಲಿ: ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಕಸ ಕಾಣಿಸಬಾರದು. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವಂತ ಕಚೇರಿಗಳಲ್ಲಿ ಹಾಗೂ ಕಚೇರಿಯ ಸುತ್ತಮುತ್ತ ಕ್ಲಿನಿನೆಸ್ ಕಾಪಾಡಿಕೊಳ್ಳಬೇಕು. ಬಿಬಿಎಂಪಿ ಎಲ್ಲ ಸ್ವಂತ ಆಫೀಸ್‌ಗಳಲ್ಲೂ ಶೂನ್ಯ ತ್ಯಾಜ್ಯ(Zero Waste) ಅಭಿಯಾನವನ್ನು ನಡೆಸಿ. ಆಫೀಸ್‌ಆವರಣದಲ್ಲಿ ಯಾವುದೇ ಕಾರಣಕ್ಕೂ ಕಸ ಇರಬಾರದು. ಸ್ವಚ್ಛತೆ ಕಾಪಾಡಿ ತ್ಯಾಜ್ಯ ಮುಕ್ತ ಆವರಣ ನಿರ್ಮಿಸಿ ಎಂದಿದ್ದಾರೆ. ಈ ಸಂಬಂಧ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಮುಂದೆ ಯಾವ ಬದಲಾವಣೆ ಆಗಿದೆ ಅಂತ ನಾನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
6 ಸಾವಿರ ಮೆಟ್ರಿಕ್‌ಟನ್ ಕಸ: ಬೆಂಗಳೂರಿನಲ್ಲಿ ಪ್ರತಿ ನಿತ್ಯವೂ 6 ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇಷ್ಟು ಕಸದಲ್ಲಿ ಎಲ್ಲ ಹಸಿ ಕಸವನ್ನೂ ಗೊಬ್ಬರವನ್ನಾಗಿ ಪರಿವರ್ತನೆ ಮಾಡುತ್ತಿಲ್ಲ. 6 ಸಾವಿರ ಮೆಟ್ರಿಕ್‌ಟನ್‌ನಲ್ಲಿ ಅರ್ಧದಷ್ಟು ಅಂದರೆ ಬರೋಬ್ಬರಿ 2,500ರಿಂದ 3000 ಸಾವಿರ ಮೆಟ್ರಿಕ್ ಟನ್ ಕಸವನ್ನು ಮಿಟಗಾನಹಳ್ಳಿ ಭೂಭರ್ತಿಗೆ ಸುರಿಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ.












Click it and Unblock the Notifications