ಮೋದಿ ಪ್ರವಾಸ: ಸಾವಿರಾರು ಅಕ್ರಮ ಬ್ಯಾನರ್ ತೆರವುಗೊಳಿಸಿದ ಬಿಬಿಎಂಪಿ
ಬೆಂಗಳೂರು ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ನಗರದಲ್ಲಿ ರಾರಾಜಿಸುತ್ತಿದ್ದ ಸುಮಾರು ಐದು ಸಾವಿರ ಅಕ್ರಮ ಬ್ಯಾನರ್ ಗಳನ್ನು ಬಿಬಿಎಂಪಿ ಅಧಿಕಾರಿಗಳ ತಂಡ ತೆರವುಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂ.20ರಿಂದ ಎರಡು ದಿನ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದರು. ಈ ಪ್ರಯುಕ್ತ ಪ್ರಧಾನಿಯನ್ನು ಸ್ವಾಗತಿಸಲು ರಾಜಕೀಯ ನಾಯಕರು ಸೇರಿದಂತೆ ಮೋದಿ ಅಭಿಮಾನಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾನರ್ ಹಾಕಿದ್ದರು. ಜತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಭಾಶಯ ಕೋರಿದ ಬ್ಯಾನರ್‌ಗಳು ರಸ್ತೆಯ ಇಕ್ಕೆಲಗಳಲ್ಲಿ ತಲೆ ಎತ್ತಿದ್ದವು. ಅಕ್ರಮ ಬ್ಯಾನರ್ ಗಳ ಕುರಿತು ಬಿಬಿಎಂಪಿ ದೂರುಗಳು ಸಹ ಸಲ್ಲಿಕೆ ಆಗಿವೆ ಎಂದು ತಿಳಿದು ಬಂದಿದೆ.
8 ವಲಯದಲ್ಲಿ 200 ಸಿಬ್ಬಂದಿ ಕಾರ್ಯಾಚರಣೆ
ಈ ಕುರಿತು ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್ ಅವರು ಮಾತನಾಡಿ, "ನಗರದ ಎಂಟು ವಲಯಗಳಲ್ಲಿ ಜಂಟಿ ಆಯುಕ್ತರ ನೇತೃತ್ವದಲ್ಲಿ 200 ಸಿಬ್ಬಂದಿ ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲ ವಲಯಗಳಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಬ್ಯಾನರ್, ಫ್ಲೆಕ್ಸ್, ಕಟೌಟ್ ಗಳನ್ನು ತೆರವು ಮಾಡಿದ್ದಾರೆ. ನಗರದ ಕನಕದಾಸ ವೃತ್ತ, ಹೆಬ್ಬಾಳ ಜಂಕ್ಷನ್, ಮೈಸೂರು ರಸ್ತೆ, ಆರ್ ಆರ್ ನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿದ್ದರು. ಈ ಕುರಿತು ಎಂಟು ವಲಯದ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಪಿಎಸ್ ಕ್ಯಾಮರಾ ಬಳಸಿ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಸುಮಾರು 5,000 ಬ್ಯಾನರ್ ತೆರವುಗೊಳಿಸಲಾಗಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ
ಹೈಕೋರ್ಟ್ ಆದೇಶವಿದ್ದರೂ ನಗರದಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಲಾಗುತ್ತಿದೆ. ರಸ್ತೆ ಬದಿಯಲ್ಲಿ ರಾಜಕೀಯ ಮುಖಂಡರನ್ನು ಸ್ವಾಗತಿಸುವ, ಶುಭಾಶಯ ತಿಳಿಸುವ ಬ್ಯಾನರ್, ಬಂಟಿಂಗ್ಸ್ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪೂರ್ಣವಾಗದ ಜಾಹೀರಾತು ನೀತಿ ನಿಯಮ
2018ರಿಂದಲೂ ಜಾಹೀರಾತು ನೀತಿ ಮತ್ತು ಬೈಲಾ ತಿದ್ದುಪಡಿ ನಿಯಮ ಪೂರ್ಣಗೊಳಿಸುವಂತೆ ಹೈಕೋರ್ಟ್ ತಿಳಿಸಿದರೂ ಬಿಬಿಎಂಪಿ ಇನ್ನು ಅಂತಿಮಗೊಳಿಸಿಲ್ಲ. ಪಾಲಿಕೆ ಮೂಲಗಳ ಪ್ರಕಾರ, ನಗರದಲ್ಲಿ ಸರ್ಕಾರಿ ಜಾಹೀರಾತುಗಳಿಗೆ ಮಾತ್ರ ಬ್ಯಾನರ್, ಬಂಟಿಂಗ್ಸ್ ಹಾಕಲು ಷರತ್ತು ಅನ್ವಯದಲ್ಲಿ ಅನುಮತಿ ಇದೆ. ಖಾಸಗಿ ವ್ಯಕ್ತಿ ಸಂಸ್ಥೆಗಳಿಗೆ ಜಾಹೀರಾತು, ಬ್ಯಾನರ್ಸ್ ಹಾಕಲು ಅನುಮತಿ ಬಿಬಿಎಂಪಿ ನೀಡಿಲ್ಲ. ಒಂದು ವೇಳೆ ಬಿಬಿಎಂಪಿ ಅನುಮತಿ ಇಲ್ಲದೇ ಬ್ಯಾನರ್, ಬಂಟಿಂಗ್ಸ್ ಹಾಕಿದರೆ ಅಂತವರ ವಿರುದ್ಧ ಎಫ್ ಐಆರ್ ದಾಖಲಿಸಿ, ದಂಡ ಸಹಿತ ಶಿಕ್ಷೆ ನೀಡುವ ಅಧಿಕಾರ ಬಿಬಿಎಂಪಿಗೆ ಇದೆ. ಸರ್ಕಾರಿ ಜಾಹೀರಾತುಗಳಿಗೆ ಏಳು ದಿನ ಅವಧಿ ನಿಗದಿಪಡಿಸಲಾಗಿರುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications