ಯಲಹಂಕ ವಲಯ: 2 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ
ಬೆಂಗಳೂರು, ಡಿಸೆಂಬರ್ 25: ಮಳೆಗಾಲ ಬಂತೆಂದರೆ ಸಾಕು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಯಲಹಂಕ ವಲಯದ ಕೆಲವೆಡೆ ಅನಾಹುತಗಳು ಸಂಭವಿಸುತ್ತಲೇ ಇವೆ. ಇದರ ಕಡವಾಣಕ್ಕೆ ಮುಂದಾಗಿರುವ ಪಾಲಿಕೆಯು ಇಲ್ಲಿನ ಟಾಟಾನಗರದಲ್ಲಿ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಜ್ಜಾಗಿದೆ. ಈ ಕುರಿತು ವಲಯ ಆಯುಕ್ತರು, ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಯಲಹಂಕ ವಲಯ ವ್ಯಾಪ್ತಿಯಲ್ಲಿ 'ಮುಖ್ಯ ಆಯುಕ್ತರ ನಡೆ ವಲಯದ ಕಡೆ' ಕಾರ್ಯಕ್ರಮದ ಸಭೆಯಲ್ಲಿ, ಟಾಟಾ ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯ ಆಯುಕ್ತರು, ಟಾಟಾ ನಗರ ವ್ಯಾಪ್ತಿಯಲ್ಲಿ ರಾಜಕಾಲುವೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ ವೆಚ್ಚೆದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಟೆಂಡರ್ ಕರೆದು ಅಭಿವೃದ್ಧಿ ಕಾಮಗಾರಿ ಶುರು ಮಾಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅವೈಜ್ಞಾನಿಕ ರಸ್ತೆ ಹಂಪ್ ತೆರವಿಗೆ ಮನವಿ
ಕೆನರಾ ಬ್ಯಾಂಕ್ ಕಾಲೋನಿಯ ರಾಜಾರಾಂ ಮೋಹನ ರಾಯ್ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಉಬ್ಬುಗಳನ್ನು (ಹಂಪ್) ನಿರ್ಮಿಲಾಗಿದೆ. ಅದನ್ನು ತೆರವುಗೊಳಿಸುವಂತೆ ಸಭೆಯಲ್ಲಿ ನಿವಾಸಿಗಳೂ ಕೋರಿದರು. ರಸ್ತೆ ಉಬ್ಬು ಮಾಡುವಾಗ ಪೊಲೀಸ್ ಅನುಮತಿ ಪಡೆಯಲಾಗಿರುತ್ತದೆ. ಈ ಪೈಕಿ ಸಂಬಂಧಪಟ್ಟ ಅಧಿಕಾರಿ ಕೂಡಲೇ ಸ್ಥಳ ಪರಿಶೀಲಿಸಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಲ್ಲಿ, ಅದನ್ನು ತೆರವುಗೊಳಿಸಲಾಗುವುದು ಎಂದರು.
ನರಸೀಪುರ ಕೆರೆಯ ಬಫರ್ ಜೋನ್ ನಲ್ಲಿ ಅನಧಿಕೃತವಾಗಿ 4 ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬೆಸ್ಕಾಂಗೆ ನೋಟೀಸ್ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿಬೇಕು. ಅನಂತರ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮಫಲಕ ಅಳವಡಿಕೆ: ವರದಿ
ಜಕ್ಕೂರು ಹಾಗೂ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಬರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನು ಅಳವಡಿಸಿರುವುದಿಲ್ಲ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಕೆ ಬಗ್ಗೆ ವರದಿ ಸಲ್ಲಿಸಿ ಎಂದು ಹೇಳಿದರು.
ಹೀಗೆ ಯಲಹಂಕ ವಲಯದ ನಾಗರಿಕರಿಂದ ಸುಮಾರು 35 ದೂರುಗಳು ಸಲ್ಲಿಕೆ ಆಗಿವೆ. ಅದರಲ್ಲಿ ಶಿವನಹಳ್ಳಿ ಕೆರೆ ಬಳಿ ಪಾದಚಾರಿ ಮಾರ್ಗ ಒತ್ತುವರಿ ತೆರವು, ರಸ್ತೆ ಅಗಲೀಕರಣ ಪೂರ್ಣಕ್ಕೆ ಮನವಿ, ಬಡಾವಣೆವೊಂದರಲ್ಲಿ ಡ್ರೈನ್ ಬ್ಲಾಕ್ ತೆರವು, ಮನೆ-ಮನೆ ಕಸ ಸಂಗ್ರಹಿಸುವ ಕಾರ್ಯ ಸಮರ್ಪಕ ನಿರ್ವಹಣೆ, ಟಾಟಾ ನಗರ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಅಳವಡಿಸಿರುವ ಸ್ಲ್ಯಾಬ್ ತೆರುವ ಸೇರಿದಂತೆ ನಾಗರಿಕ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಕೆ ಆದವು.












Click it and Unblock the Notifications