ಬೆಂಗ್ಳೂರಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ 300 ಕೋಟಿ ಸ್ಕೀಮು
ಬೆಂಗಳೂರು, ಸೆಪ್ಟೆಂಬರ್ 4: ಮಳೆಯಿಂದಾಗಿ ಪ್ರವಾಹ ಸ್ಥಿತಿ ಸೃಷ್ಟಿಯಾಗುವುದು, ನೀರು ಮನೆಗಳಿಗೆ ನುಗ್ಗುವುದು ಬೆಂಗಳೂರಿನ ಪಾಲಿಗೆ ಹೊಸ ಚಿತ್ರಣವೇನಲ್ಲ. ಇದೀಗ ಬಿಬಿಎಂಪಿಯಿಂದ ಬೆಂಗಳೂರಿನಲ್ಲಿ ಮಳೆಯ ಅನಾಹುತವನ್ನು ತಾತ್ಕಾಲಿಕವಾಗಿ ತಡೆಯುವ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ತಗುಲುವ ವೆಚ್ಚ ಕೇವಲ 300 ಕೋಟಿ ರುಪಾಯಿ ಮಾತ್ರವಂತೆ.
ಚಿತ್ರಗಳು : ಬೆಂಗಳೂರಿನ ಜನರಿಗೆ ಸಂಕಷ್ಟ ತಂದ ಮಳೆ
ಪ್ರವಾಹ ಹಾನಿಯ ದುರಸ್ತಿ ಕೆಲಸ, ರೋಬೋಟಿಕ್ ತಂತ್ರಜ್ಞಾನ ಬಳಸಿ ಒಳಚರಂಡಿ ಸ್ವಚ್ಛತೆ ಹಾಗೂ ರಕ್ಷಣಾ ಕಾರ್ಯಾಚರಣೆ ಸಹ ಈ ಯೋಜನೆಯಲ್ಲಿ ಒಳಗೊಂಡಿವೆ. ಎಲ್ಲೆಲ್ಲಿ ನೀರು ಬಂದು ಸಮಸ್ಯೆ ಆಗುತ್ತಿದೆ ಅಂಥ ಪ್ರದೇಶಗಳನ್ನು ಆದ್ಯತೆ ಮೇರೆಗೆ ಗುರುತಿಸಿ, ತುರ್ತಾಗಿ ಕಾಮಗಾರಿ ಕೈಗೊಳ್ಳುವ ಉದ್ದೇಶ ಬಿಬಿಎಂಪಿಗೆ ಇದೆ.

ಮಾಧ್ಯಮಗಳ ಜತೆಗೆ ಭಾನುವಾರ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, 842 ಕಿ.ಮೀ.ನ ಚರಂಡಿ ಮರುರೂಪಿಸುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಾರ್ವಜನಿಕರು ಭಾವಿಸಿದ್ದಾರೆ. ಆ ಕಾಮಗಾರಿಗೆ 800 ಕೋಟಿ ವೆಚ್ಚವಾಗುತ್ತದೆ. ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಅರ್ಧದಷ್ಟು ಮಾತ್ರ ಕೆಲಸ ಆಗಿದೆ. ಬಾಕಿ ಕೆಲಸ ಶೀಘ್ರದಲ್ಲಿ ಪೂರ್ತಿ ಮಾಡ್ತೀವಿ ಎಂದಿದ್ದಾರೆ.
ಇದರ ಜತೆಗೆ 300 ಕೋಟಿ ರುಪಾಯಿಯ ಯೋಜನೆಯೊಂದನ್ನು ರೂಪಿಸಿದ್ದೇವೆ. ಅದನ್ನು ಶೀಘ್ರದಲ್ಲೇ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದು, ಕೆಲಸ ಆರಂಭಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಅನಿರೀಕ್ಷಿತವಾಗಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರಿಂದ ಇಂಥ ಅನಾಹುತಗಳಾಗಿವೆ. ಸಾಧಾರಣವಾಗಿ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 126 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ಬಾರಿ 249 ಮಿ.ಮೀ. ಮಳೆಯಾಗಿದೆ. ಇನ್ನು ಸೆಪ್ಟೆಂಬರ್ ನಲ್ಲಿ ಎರಡೇ ದಿನದಲ್ಲಿ 86 ಮಿ.ಮೀ. ಮಳೆಯಾಗಿದ್ದು, ತಗ್ಗಿನ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದೆ ಎಂದು ಜಾರ್ಜ್ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲೇ ಇಂಥ ಪ್ರವಾಹ ಸ್ಥಿತಿ ಏರ್ಪಡುತ್ತದೆ. ಮುಂಬೈ ಅಥವಾ ಪುಣೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪ್ರವಾಹ ನಿರ್ವಹಣೆ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಇಂಥ ಯೋಜನೆಗಳೆಲ್ಲ ಕಣ್ಣೊರೆಸುವುದಕ್ಕೆ ಅಷ್ಟೇ ಎಂದು ಪರಿಸರ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಡೀ ನಗರದ ಒಳಚರಂಡಿ ವ್ಯವಸ್ಥೆ ಸರಿಪಡಿಸುವುದಕ್ಕೆ ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಮುನ್ನೂರು ಕೋಟಿ ರುಪಾಯಿ ಏನೇನೂ ಸಾಕಾಗುವುದಿಲ್ಲ" ಎಂದು ಬೆಂಗಳೂರಿನ ಪರಿಸರವಾದಿಗಳು ಅಸಮಾಧಾನ ಹೊರಹಾಕಿದ್ದಾರೆ.











Click it and Unblock the Notifications