ಬೆಂಗಳೂರು ಅಪೂರ್ಣ ಕಾಮಗಾರಿಗಳ ಸಮಸ್ಯೆಗೆ ಮುಕ್ತಿ, ಕೆಲಸ ಪುನಾರಂಭಕ್ಕೆ ಬಿಬಿಎಂಪಿ ನಿರ್ಧಾರ
ಬೆಂಗಳೂರು, ನವೆಂಬರ್ 19: ಬೆಂಗಳೂರಿನಲ್ಲಿ ಒತ್ತುವರಿ ತೆರವು, ಅನಧಿಕೃ ಕಟ್ಟಡ ನೆಲಸಮ ಕಾರ್ಯ ಮುಂದುವರೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಇದೀಗ ನಗರದಲ್ಲಿ ಅಪೂರ್ಣ ಕಾಮಗಾರಿಗಳನ್ನು ಪುನಾರಂಭಿಸಲಿದೆ. ಈ ಕುರಿತು ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೊಮ್ಮನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ ಅಲ್ಲಿನ ವಲಯ ಜಂಟಿ ಆಯುಕ್ತರ ಕಛೇರಿಯಲ್ಲಿ ಮಂಗಳವಾರ "ಆಯುಕ್ತರ ನಡೆ ವಲಯದ ಕಡೆ" ಕಾರ್ಯಕ್ರಮದಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿರುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಅಪೂರ್ಣ ಕಾಮಗಾರಿಗಳನ್ನು ಪಟ್ಟಿ ಮಾಡಿಕೊಂಡು ವರದಿ ಸಿದ್ದಪಡಿಸಲು ಸೂಚನೆ ನೀಡಿದರು.

ಕೆರೆಗಳ ಪರಿಶೀಲಿಸಿ, ರಸ್ತೆಗುಂಡಿಗಳಿಗೆ ಮುಕ್ತಿ ಕೊಡಿ
ಈ ವಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿರಬೇಕು. ಈ ಸಂಬಂಧ ಮಾರ್ಷಲ್ ಗಳ ಗಸ್ತು ತಿರುಗುವ ವಾಹನವು ರಾತ್ರಿ ವೇಳೆ ಎಲ್ಲಾ ಕೆರೆಗಳಿಗೆ ಭೇಟಿ ನೀಡಿ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.
ಗಸ್ತು ತಿರುಗುವ ವೇಳೆ ಕಸ ಬಿಸಾಡುವ ಹಾಗೂ ಬೀದಿ ದೀಪಗಳ ಅಳವಡಿಕೆಯ ಮೇಲೆಯೂ ನಿಗಾವಹಿಸಲು ಮಾರ್ಷಲ್ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.

ಬೊಮ್ಮನಹಳ್ಳಿ ವಲಯದ ಎಲ್ಲಾ ಪ್ರಮಖ ರಸ್ತೆಗಳಲ್ಲಿ ರಸ್ತೆ ಮೇಲ್ಮೈ ಪದರ ಹಾಳಾಗಿರುವ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪರಿಶೀಲನೆ ನಡೆಸಿ ಪಟ್ಟಿ ಮಾಡಬೇಕು. ಅವಶ್ಯಕ ಡಾಂಬರನ್ನು ತರೆಸಿಕೊಂಡು ಕೂಡಲೆ ರಸೆ ಮೇಲ್ಮೈ ಹಾಳಾಗಿರುವ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಿ ಸೂಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಿ.
ಆಟದ ಮೈದಾನ, ಕೆರೆ ಹಾಗೂ ಉದ್ಯಾನವನಗಳ ವರದಿ ನೀಡಿ
ಈ ವಲಯ ವ್ಯಾಪ್ತಿಯಲ್ಲಿ ಬರುವ ಆಟದ ಮೈದಾನಗಳು, ಕೆರೆಗಳು ಹಾಗೂ ಉದ್ಯಾನವನಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಈ ಸಂಬಂಧ ಎಲ್ಲಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಬೇಕು.
ಬೇಗೂರು ರಸ್ತೆ ಅಗಲೀಕರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಬೇಗೂರು ರಸ್ತೆ ಅಗಲೀಕರಣದ ಕುರಿತಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗಲೀಕರಣದ ಜಾಗದಲ್ಲಿ ಬರುವ ಆಸ್ತಿ ಮಾಲೀಕರ ಜೊತೆ ಸಭೆ ನಡೆಸಿ ಟಿಡಿಆರ್ ನೀಡುವ ಸಲುವಾಗಿ ಸರಿಯಾದ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಜಂಟಿ ಆಯುಕ್ತರಿಗೆ ಸೂಚಿಸಿದರು.
BWSSB ಎಸ್‌ಟಿಪಿಗೆ ಜಾಗ ನೀಡಲು ಕೋರಿಕೆ
ಬಿಬಿಎಂಪಿಗೆ ಸಂಬಂಧಿಸಿದ ಮೂರು ಎಕರೆ ಜಾಗವು ಮಡಿವಾಳ ಕೆರೆ ಭಾಗದಲ್ಲಿದೆ. ಆ ಸ್ಥಳದಲ್ಲಿ 45 ಎಂ.ಎಲ್.ಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶ ಕಲ್ಪಿಸಿಕೊಡಲು ಜಲಮಂಡಳಿ ಅಧಿಕಾರಿಗಳು ಕೋರಿದರು. ಅದಕ್ಕೆ, 3 ಎಕರೆ ಪ್ರದೇಶ ಹಸ್ತಾಂತರ ಮಾಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಬೆಂಗಳೂರು ಬಿಬಿಎಂಪಿ ಜಾಗಗಳಿಗೆ ಫೆನ್ಸಿಂಗ್ ಅಳವಡಿಸುವುದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಫೆನ್ಸಿಂಗ್ ಅಳವಡಿಸುವ ಜಾಗದ ಮಾಹಿತಿ ಪಟ್ಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗುವುದ ಎಂದರು.
ಬಂಡೆಪಾಳ್ಯದಲ್ಲಿ ಒತ್ತುವರಿ ತೆರವು ಶೀಘ್ರ
ಹೊಂಗಸಂದ್ರ ಬಂಡೆಪಾಳ್ಯದಲ್ಲಿ ಸುಮಾರು 9 ಎಕರೆ ಪಾಲಿಕೆ ಜಾಗವನ್ನು ಒತ್ತುವರಿ ಆಗಿದೆ. ಈ ಸ್ಥಳಲ್ಲಿ ಎಷ್ಟು ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ, ಅದನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಿ ಫೆನ್ಸಿಂಗ್ ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು ಈ ವೇಳೆ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 80ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದರು.












Click it and Unblock the Notifications