ಬೆಂಗಳೂರಲ್ಲಿ 'ಗಣರಾಜ್ಯೋತ್ಸವ' ಆಚರಣೆಗೆ ಸಕಲ ಸಿದ್ಧತೆ: ಬಿಬಿಎಂಪಿ
ಬೆಂಗಳೂರು, ಜನವರಿ 18: ಪ್ರಸಕ್ತ 2024ನೇ ಸಾಲಿನ ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಗುರುವಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
2024ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂಬಂಧ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಈ ವೇಳೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನಾಚರಣೆಯ ದಿನ ಆವರಣಕ್ಕೆ ಬರುವ ಅತೀ ಗಣ್ಯರು, ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಯಾವ ದ್ವಾರದಲ್ಲಿ ಬರಬೇಕು ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳ ವಿಚಾರವಾಗಿ ಯಾವುದೇ ಲೋಪಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದರು.

ಕವಾಯತಿಗೆ ಏರ್ಪಡು ಮಾಡಿಕೊಳ್ಳಲು ಸೂಚನೆ
ಪ್ರತಿ ವರ್ಷದಂತೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕವಾಯತು ಪ್ರದರ್ಶನಕ್ಕಾಗಿ ಅಗತ್ಯ ಏರ್ಪಾಡುಗಳನ್ನು ಮಾಡಿಕೊಂಡು ಪೋಲೀಸ್ ಇಲಾಖೆಯಿಂದ ಶಿಷ್ಟಾಚಾರದನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಎಂದು ಹೇಳಿದರು.
ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುವ ವೇಳೆ ಮೈದಾನದಲ್ಲಿ ಧೂಳು ಏಳುವ ಸಾಧ್ಯತೆಯಿದ್ದು, ಮೈದಾನಕ್ಕೆ ನೀರನ್ನು ನಿಯಮಿತವಾಗಿ ಸಿಂಪಡಿಸಿ ಮಣ್ಣಿನ ಧೂಳು ಏಳದಂತೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಯಿತು.

ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ
ಇನ್ನೂ ಪೊಲೀಸ್ ಇಲಾಖೆಯು ಈ ಸಂಬಂಧ ಆದಷ್ಟು ಶೀಘ್ರವೇ ಸಭೆ ನಡೆಸಲಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಇತ್ತೀಚೆಗೆ ಹೊಸ ವರ್ಷದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಗಣರಾಜ್ಯೋತ್ಸವ ಸಂಬಂಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದು, ಅಗತ್ಯ ಎಚ್ಚರಿಕೆ, ಬಂದೋಬಸ್ತ್ ಒದಗಿಸಲಿದ್ದಾರೆ. ಈ ಸಂಬಂಧ ಜನವರಿ 26ರಂದು ಮಾಣಿಕ್ ಷಾ ಪರೇಡ್ ಮೈದಾನ ಸುತ್ತಮುತ್ತ ಒಂದಷ್ಟು ರಸ್ತೆ ಮಾರ್ಗಗಳು ಬದಲಾವಣೆ ಆಗುವ ಸಾಧ್ಯತೆಗಳು ಇವೆ.
ಬಿಬಿಎಂಪಿ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಕೆ.ಎ.ದಯಾನಂದ್, ವಲಯ ಆಯುಕ್ತರಾದ ಸ್ನೇಹಲ್, ಉಪ ಆಯುಕ್ತರಾದ ಮಂಜುನಾಥಸ್ವಾಮಿ, ಪೊಲೀಸ್ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications