Underground AC Market: ಬೆಂಗಳೂರಿನ ವಿವಿಧೆಡೆಯೂ 'ಪಾಲಿಕೆ ಬಜಾರ್‌ಗಳ' ನಿರ್ಮಾಣ, ಪ್ಲಾನ್ ಹೀಗಿದೆ
ಬೆಂಗಳೂರು, ಸೆಪ್ಟಂಬರ್ 16: ಹೈಟೆಕ್ ಎಂಬ ಪದಕ್ಕೆ ಸಿಲಿಕಾನ್ ಸಿಟಿ ಹೆಸರುವಾಸಿ. ಹೊಸ ಹೊಸ ಪ್ರಯೋಗಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ದೆಹಲಿ ಮಾದಿರಯಲ್ಲಿ ಎಸಿ ಸಹಿತ ಭೂಗತ ಮಾರುಕಟ್ಟೆಯನ್ನು (Underground AC Market/Palika Bazar) ವಿಜಯನಗರದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಅದೇ ರೀತಿ ಮಾರುಕಟ್ಟೆಗಳನ್ನು ಬೆಂಗಳೂರಿನಾದ್ಯಂತ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಿಜಯನಗರದ ಪಾಲಿಕೆ ಬಜಾರ್ ಸ್ಥಾಪಿಸಿ, ಕೆಲವೇ ದಿನಗಳಲ್ಲಿ ಅದನ್ನು ಬೀದಿ ಬದಿ ವ್ಯಾಪಾರಿಗಳಿಗೆ ನೀಡಿತ್ತು. ಇದೀಗ ಅಲ್ಲಿ ಉತ್ತಮ ವ್ಯಾಪಾರ ವಹೀವಾಟು ನಡೆಯುತ್ತಿದೆ. ಅಂಥದ್ದೆ ಪಾಲಿಕೆ ಬಜಾರ್‌ಗಳನ್ನು ನಗರದ ವಿವಿಧೆಡೆ ನಿರ್ಮಿಸಿ ಗ್ರಾಹಕರಿಗೆ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಬಿಬಿಎಂಪಿ ಯೋಜಿಸಿದೆ.

ಸದ್ಯ ವಿಜಯನಗರ ಪಾಲಿಕೆ ಬಜಾರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಬೇರೆ ಕಡೆ ಪಾಲಿಕೆ ಬಜಾರ್ ನಿರ್ಮಿಸಲು ಸೂಕ್ತ ಸ್ಥಳಗಳನ್ನು ಗುರುತಿಸುವಲ್ಲಿ ಬಿಬಿಎಂಪಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ.
60 ವ್ಯಾಪಾರಿಗಳಿಗೆ ಅವಕಾಶ ಸಿಗುವಂತೆ ನಿರ್ಮಾಣ
ಅನುಕೂಲಕರ ಈ ಭೂಗತ ಮಾರುಕಟ್ಟೆಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂದು ಚರ್ಚೆ ನಡೆದಿದೆ. ಈ ಸಂಬಂಧ ಸೂಕ್ತ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಒಂದು ಮಾರುಕಟ್ಟೆಯಲ್ಲಿ ಸುಮಾರು 50 ರಿಂದ 60 ಮಾರಾಟಗಾರರಿಗೆ ಸ್ಥಳಾವಕಾಶ ಸಿಗುವಂತೆ ತಯಾರಿಸಬೇಕಿದೆ. ಮುಖ್ಯವಾಗಿ ಯಾವ ಪ್ರದೇಶಗಳಲ್ಲಿ ಇಂತಹ ಮಾರುಕಟ್ಟೆಗಳು ನಿರ್ಮಾಣವಾದರೆ ಏನೆಲ್ಲ ಲಾಭಗಳು ಎಂಬುದನ್ನು ನಿರ್ಧರಿಸಬೇಕಿದೆ.

ಸದ್ಯ ಇದೆಲ್ಲದರ ಸಂಬಂಧ ಮೊದಲು ನಾವು ಸಮೀಕ್ಷೆ ಕೈಗೊಳ್ಳಲಿದ್ದೇವೆ. ನಂತರ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುತ್ತದೆ. ನಗರದ ದಕ್ಷಿಣ ವಲಯದಲ್ಲಿ ಈ ರೀತಿಯ ಮಾರುಕಟ್ಟೆಗಳ ಅಗತ್ಯತೆ ಹೆಚ್ಚಿದೆ. ಬೇಡಿಕೆಯೂ ಇದೆ ಎಂದು ಬಿಬಿಎಂಪಿ ನಂಬಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಒಂದು ಕಡೆ ಬೀದಿ ವ್ಯಾಪಾರದ ಪ್ರದೇಶಗಳನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ಯೋಜನೆ ಉಪಯುಕ್ತ ಕಾರಿ ಎಂಬ ಅಭಿಪ್ರಾಯ ಇದೆ. ಮತ್ತೊಂದೆಡೆ ಪಾದಚಾರಿಗಳಿಗೆ ಫುಟ್‌ಪಾತ್ ಇಲ್ಲದೆ ತೊಂದರೆ ಆಗಬಹುದು. ರಸ್ತೆ ಬದಿಯ ವ್ಯಾಪಾರಿಗಳು ಭೂಗತ ಮಳಿಗೆಗಳಿಗೆ ಸ್ಥಳಾಂತರವಾದರೆ ತಮ್ಮ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಪಾಲಿಕೆ ಬಜಾರ್‌ಗೆ ವ್ಯಾಪಾರಿಗಳ ಮಿಶ್ರ ಪ್ರತಿಕ್ರಿಯೆ
ಪಾದಚಾರಿಗಳು, ಬೈಕ್ ಸವಾರರು ರಸ್ತೆ ಬದಿ ಬೈಕ್ ನಿಲ್ಲಿಸಿ ತ್ವರಿತವಾಗಿ ಬೀದಿ ಬದಿ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುತ್ತಾರೆ. ಇದು ಭೂಗತ ಮಾರುಕಟ್ಟೆಯಿಂದ ಸಾಧ್ಯವಿಲ್ಲ. ಏಕೆಂದರೆ ನಮ್ಮ ಗ್ರಾಹಕರಿಗೆ ಪಾರ್ಕಿಂಗ್ ಮಾಡಲು ಮತ್ತು ಶಾಪಿಂಗ್ ಮಾಡಲು ಹೆಚ್ಚು ಸಮಯ ಇರುವುದಿಲ್ಲ. ತ್ವರಿತ ಖರೀದಿಗೆ ಇಷ್ಟಪಡುತ್ತಾರೆ. ಈ ಹೊಸ ಯೋಜನೆಯಿಂದ ಕೆಲವು ಬೀದಿ ಬದಿ ವ್ಯಾಪಾರಿಗಳಿಗೆ ಹಾನಿ ಆಗುತ್ತದೆ ಎಂದು ಕೆಲವು ವ್ಯಾಪಾರಿಗಳು ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರ ಮಾಡು ಹೆಚ್ಚು ಸಮಯ ಹಿಡಿಯದು, ವೇಗ ವ್ಯಾಪಾರ ವಹೀವಾಟು ಎಂದರೆ ತಪ್ಪಾಗಲಾರದು. ಎಷ್ಟೋ ವಸ್ತುಗಳು, ರಸ್ತೆಯಲ್ಲಿ ಹಾದು ಹೋಗುವಾಗ ಸವಾರರು ನೋಡಿ ನೆನಪು ಮಾಡಿಕೊಂಡು ಖರೀದಿಸುವ ವರ್ಗವು ಇದೆ. ಆದರೆ ಇದು ಭೂಗತ ಮಾರುಕಟ್ಟೆಯಿಂದ ಈ ರೀತಿ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂದು ವ್ಯಾಪಾರಿಗಳು ಅಭಿಪ್ರಾಯ ಹೊರ ಹಾಕಿದ್ದಾರೆ. ಒಟ್ಟಾರೆ ಈ ಭೂಗತ ಮಾರುಕಟ್ಟೆಗೆ ಸದ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.












Click it and Unblock the Notifications