NHAI, BWSSB, BDA ಗೆ ಮಳೆ-ಪ್ರವಾಹ ಕುರಿತು ಬಿಬಿಎಂಪಿ ಪಾಠ
ಬೆಂಗಳೂರು, ಜೂನ್ 03: ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷದ ರಾಷ್ಟ್ರೀಯ ಹೆದ್ದಾರಿಗಳು ಭಾರೀ ಮಳೆಗೆ ಪ್ರವಾಹ ಸ್ಥಿತಿ ತಲುಪಿದ್ದವು. ಇದೀಗ NHAI ಹೆದ್ದಾರಿಗಳಲ್ಲಿ ನೀರು ನಿಲ್ಲದಂತೆ, ರಸ್ತೆಗಳು ಜಲಾವೃತವಾಗದಂತೆ ಸರ್ಕಾರ ಸೂಚನೆ ನೀಡಿದೆ.
ಹೆಬ್ಬಾಳದ ಬಳಿಯಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ರಸ್ತೆಯಲ್ಲಿ ನೀರು ನಿಂತಿದೆ. ಮುಂದಿನ ಇಂತಹ ರಸ್ತೆಗಳು ಜಲಾವೃತವಾಗದಂತೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, NHAI ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಎಲ್ಲಿಯೂ ಜಲಾವೃತವಾಗದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ಜೋರು ಮಳೆಯಾದ ಪರಿಣಾಮ ಯಲಹಂಕ ವಲಯಾ ವ್ಯಾಪ್ತಿಯಲ್ಲಿ ಜಲಾವೃತವಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಮೆಟ್ರೋ ಕಾಮಗಾರಿ: ಪೈಪ್ ಬ್ಲಾಕ್
ಹೆಬ್ಬಾಳ ಜಂಕ್ಷನ್ ನಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗಲು ಬಿಡಿಎ ವತಿಯಿಂದ 1200 ಎಂ.ಎಂ ಪೈಪ್ ಅಳವಡಿಸಲಾಗಿತ್ತು. ಸದರಿ ಸ್ಥಳದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಫಿಲ್ಲರ್ ಗಳ ಫೈಲಿಂಗ್ ಕಾಮಗಾರಿಯ ವೇಳೆ ಮಳೆ ನೀರು ಹರಿದು ಹೋಗಲು ಅಳವಡಿಸಿದ್ದ ಪೈಪ್ ಬ್ಲಾಕ್ ಆಗಿರುವ ಕಾರಣ ಮಳೆ ನೀರು ರಾಜಕಾಲುವೆ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ.
ಇದರಿಂದ ಮಳೆ ನೀರು ರಸ್ತೆಯ ಮೇಲೆ ಹೆಚ್ಚಾಗಿ ನಿಲ್ಲುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಸಂಬಂಧ ಬಿಡಿಎ ಅಧಿಕಾರಿಗಳು ಕೂಡಲೆ ಮೆಟ್ರೋ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಪೈಪ್ ಲೈನ್ ಅನ್ನು ಸರಿಪಡಿಸಿ ರಾಜಕಾಲುವೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹೆಬ್ಬಾಳದಿಂದ ಯಲಹಂಕ ಕಡೆ ಹೋಗುವ ರಸ್ತೆಯನ್ನು NHAI ಅಧಿಕಾರಿಗಳೊಟ್ಟಿಗೆ ಪರಿಶೀಲಿಸಿ ಮಳೆ ಬೀಳುವ ಸಮಯದಲ್ಲಿ ರಸ್ತೆಯಲ್ಲಿ ಸಾಕಷ್ಟು ಸಮಯ ನೀರು ನಿಲ್ಲುತ್ತದೆ. ಅದನ್ನು ತಪ್ಪಿಸುವ ಸಲುವಾಗಿ NHAIನಿಂದ ಕೂಡಲೆ ಅಲ್ಲಲ್ಲಿ ಗ್ರೇಟಿಂಗ್ ಗಳನ್ನು ಹಾಕಿ ಮಳೆ ನೀರು ಸರಾಗವಾಗಿ ಸೈಡ್ ಡ್ರೈನ್/ಚೇಂಬರ್ ಗಳ ಮೂಲಕ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು.
ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಂತೆ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಚತೆ ಕಾಪಾಡಿಕೊಳ್ಳಲು NHAI ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಯಂತಾದ ಸಹಕಾರ ನಗರದ ಬಳಿಯ ರಸ್ತೆ
ಸಹಕಾರ ನಗರದ ಹತ್ತಿರ ಎನ್.ಹೆಚ್.ಎ.ಐನ ಸರ್ವೀಸ್ ರಸ್ತೆಯಲ್ಲಿ ಮಳೆಯಾದರೆ ಜಲಾವೃತವಾಗಿ ವಾಹನ ಸವಾರರು ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸ್ಥಳದಲ್ಲಿ ಜಲಮಂಡಳಿ ಅಳವಡಿಸಿರುವ ಒಳಚರಂಡಿ ನೀರು ಕೂಡಾ ಹೊರ ಬರುತ್ತಿದ್ದು, ಹೆಚ್ಚು ಜಲಾವೃತವಾಗಲು ಕಾರಣವಾಗಿದೆ.
ಜೊತೆಗೆ ರಾಜಕಾಲುವೆಗೆ ನೀರು ಹೋಗಲು NHAI ಮಾಡಿರುವ ಕಲ್ವರ್ಟ್ ಸಂಪರ್ಕ ಸರಿಯಾಗಿಲ್ಲದ ಕಾರಣ ನೀರು ನಿಲ್ಲುತ್ತದೆ. ಆದ್ದರಿಂದ ಜಲಮಂಡಳಿಯಿಂದ ರಸ್ತೆಯ ಎರಡೂ ಬದಿ 900 ಎಂಎಂ ಪೈಪ್ ಅಳವಡಿಸಲು ಜಲಮಂಡಳಿ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಜೊತೆಗೆ ಕಲ್ವರ್ಟ್ ನಿಂದ ರಾಜಕಾಲುವೆ ನೀರು ಹರಿದು ಹೋಗಲು ಪೈಪ್ ಅಳವಡಿಸಬೇಕು ಎಂದರು.
ಸಹಕಾರ ನಗರ ಬಾಟಾ ಶೋರೂಂ ಬಳಿ ರಾಜಕಾಲುವೆಯನ್ನು ಪರಿಶೀಲಿಸಿ ಮಳೆ ನೀರು ಎರಡು ಕಡೆ ಬರುತ್ತಿದ್ದು, ಜೋರು ಮಳೆಯಾದ ವೇಳೆ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆಗೆ ಬರುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಕಾಲುವೆಯಲ್ಲಿ ತಿರುವು ವ್ಯವಸ್ಥೆ ಮಾಡಬೇಕು. ಇದೇ ಸ್ಥಳದಲ್ಲಿ ರಾಜಕಾಲುವೆಯನ್ನು ಪರಿಶೀಲಿಸಿ ರಾಜಕಾಲುವೆ ಒತ್ತುವರಿಯಾಗಿದ್ದರೆ ಅದನ್ನು ಪರಿಶೀಲಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.
ಕಲ್ವರ್ಟ್ ಬ್ಲಾಕ್ ಆಗಿರುವ ಸ್ಥಳ ಪರಿಶೀಲನೆ
ಯಲಹಂಕ ಸ್ಪರ್ಶ್ ಆಸ್ಪತ್ರೆಯ ಬಳಿ NHAI ಕಲ್ವರ್ಟ್ ಡ್ರೈನ್ ಮಾಡಿದ್ದು, ಮೆಟ್ರೋ ಫಿಲ್ಲರ್ (ಫಿಲ್ಲರ್ ಸಂಖ್ಯೆ 573) ಫೈಲಿಂಗ್ ಕಾಮಗಾರಿಯಿಂದ ಕಲ್ವರ್ಟ್ ಬ್ಲಾಕ್ ಆಗಿದೆ. ಆ ಸಮಸ್ಯೆಯನ್ನು ಮಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿ ಕೂಡಲೇ ಬಗೆಹರಿಸಲು ಸೂಚಿಸಿದರು.
ರಾಜಕಾಲುವೆ ಕಾಮಗಾರಿ ಪರಿಶೀಲನೆ: ಕಲ್ವರ್ಟ್ ಸಮಸ್ಯೆ
ಕೋಗಿಲು ಸಿಗ್ನಲ್ ಬಳಿ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ಪರಿಶೀಲಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರು, ಇದರಿಂದ ಮಳೆಯಾದರೆ ಮಳೆ ನೀರು ನಿಂತು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಸದರಿ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಿ ಎಂದರು.
ನಿಟ್ಟೆ ವಿದ್ಯಾಸಂಸ್ಥೆಗೆ ಹೋಗುವ ಬಳಿ ಮೆಟ್ರೋ ಸ್ಟೇಷನ್ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಯೂ ಕಲ್ವರ್ಟ್ ಬ್ಲಾಕ್ ಆಗಿರುತ್ತದೆ. ಬ್ಲಾಕ್ ಆಗಿರುವ ಕಲ್ವರ್ಟ್ ಅನ್ನು ಎನ್.ಹಚ್.ಎ.ಐ ಅಧಿಕಾರಿಗಳೊಟ್ಟಿಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಲು ಮೆಟ್ರೊ ಅಧಿಕಾರಿಗಳಿಗೆ ತಿಳಿಸಿಸಿದರು.
ಟೆಲಿಕಾಂ ಲೇಔಟ್ ಸಂಪೂರ್ಣ ಜಲಾವೃತ
ಬೆಂಗಳೂರಿನಲ್ಲಿ ನೆನ್ನೆ ಭಾನುವಾರ ಸುರಿದ ಜೋರು ಮಳೆಯಿಂದಾಗಿ ರಾಚೇನಹಳ್ಳಿ ಕೆರೆ ಬಳಿ ಟೆಲಿಕಾಂ ಲೇಔಟ್ ನಲ್ಲಿ ಜವಾಲವೃತವಾಗಿದೆ. ನೀರಿನ ಹರಿಯುವಿಕೆಗಾಗಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಜಲಾವೃತವಾಗುತ್ತಿದೆ. ರಾಜಕಾಲುವೆಗೆ ನೀರು ಹರಿದು ಹೋಗುವಂತೆ ಮಾಡಬೇಕು.
ಈ ಸಂಬಂಧ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್(JNCASR) ನಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಬಳಿ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಹಗಲ ಮಾಡಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.












Click it and Unblock the Notifications