ಮೊಬೈಲ್ ಟವರ್ ಹಾಕುವ ಮುನ್ನಾ ಬಿಬಿಎಂಪಿಗೆ ಶುಲ್ಕ ಕಟ್ಟಬೇಕು
ಬೆಂಗಳೂರು, ಆಗಸ್ಟ್ 29: ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಮೊಬೈಲ್ ಟವರ್‌ಗಳನ್ನು ಅಳವಡಿಸಲು ಮೊಬೈಲ್ ಸಂಸ್ಥೆಗಳು ಬಿಬಿಎಂಪಿಗೆ ಭಾರಿ ಶುಲ್ಕ ಪಾವತಿಸಬೇಕು.
ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮೊಬೈಲ್ ಟವರ್‌ಗಳ ಮೇಲೆ ನಿಯಂತ್ರಣ ಹೇರಲು ಬಿಬಿಎಂಪಿ ಮುಂದಾಗಿದ್ದು, ಮೊಬೈಲ್ ಟವರ್‌ಗಳಿಗೆ ಭಾರಿ ಶುಲ್ಕ ಹೇರಲು ಮುಂದಾಗಿದೆ.
ಮೊಬೈಲ್ ಟವರ್ ಸ್ಥಾಪಿಸುವ ಮುನ್ನಾ ಬಿಬಿಎಂಪಿ ಅನುಮತಿ ಪಡೆಯಲು ಎರಡೂವರೆ ಲಕ್ಷ ಹಣ ಮತ್ತು ಸ್ಥಾಪಿಸಿದ ನಂತರ ವರ್ಷಕ್ಕೆ 50 ಸಾವಿರ ರೂಪಾಯಿ ಪಾವತಿಸಬೇಕು ಎಂಬ ನಿಯಮವನ್ನು ಬಿಬಿಎಂಪಿ ತರುತ್ತಿದೆ.

ಮೊಬೈಲ್ ಕಂಪೆನಿಗಳ ವಿರೋಧ
ಬಿಬಿಎಂಪಿ ಸಂಪನ್ಮೂಲ ಹೆಚ್ಚಳಕ್ಕೆ ಮುಂದಾಗಿದ್ದು ಅದರ ಭಾಗವಾಗಿಯೇ ಈ ನಿಯಮ ಜಾರಿಗೆ ತರಲಾಗಿದೆ. ಆದರೆ ಈ ನಿಯಮಕ್ಕೆ ಈಗಾಗಲೇ ಮೊಬೈಲ್ ಕಂಪೆನಿಗಳು ವಿರೋಧ ವ್ಯಕ್ತಪಡಿಸಿವೆ.

6766 ಟವರ್‌ಗಳಿವೆ
ಈಗಾಗಲೇ ನಗರದಲ್ಲಿ 6766 ಮೊಬೈಲ್ ಟವರ್‌ಗಳಿವೆ. ಎಟಿಸಿ ಸಂಸ್ಥೆಯ 1920, ಇಂಡಸ್-2904, ಟವರ್ ಮಿಷನ್ 448, ರಿಲಯನ್ಸ್ 873, ರಿ ಇನ್ಫ್ರಾ ಸಂಸ್ಥೆಯ 621 ಟವರ್‌ಗಳು ನಗರದಲ್ಲಿ ಇವೆ. ಈ ಟವರ್‌ಗಳಲ್ಲಿ ಹೆಚ್ಚಿನವು ವಸತಿ ಮನೆಗಳ ಮೇಲೆ ಇವೆ.

ಬಿಬಿಎಂಪಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ
ನಿನ್ನೆ ಬಿಬಿಎಂಪಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ನಿರ್ಣಯಿಸಲಾಗಿದೆ. ಸೆಪ್ಟಂಬರ್ 10ರಂದು ನಡೆಯುವ ವಿಷಯಾಧಾರಿತ ಸಭೆಯಲ್ಲಿ ಟವರ್‍ಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪಕ್ಕೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ.

ಜನವಸತಿ ಪ್ರದೇಶದಲ್ಲೇ ಟವರ್‌ಗಳು
ಜನವಸತಿ ಪ್ರದೇಶಗಳಲ್ಲೇ ಇಂತಹ ಮೊಬೈಲ್ ಟವರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿರುವುದರಿಂದ ಜನರು ಮತ್ತು ಪಕ್ಷಿ ಸಂಕುಲಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದ ಹಿನ್ನೆಲೆಯಲ್ಲಿ ಪಾಲಿಕೆ ಇದೀಗ ಅವುಗಳ ಮೇಲೆ ನಿಯಂತ್ರಣ ಹೇರುವುದಕ್ಕೆ ಮುಂದಾಗಿದ್ದು ಅದಕ್ಕಾಗಿ ವರಮಾನ ಹೆಚ್ಚಿಸುತ್ತಿದೆ.












Click it and Unblock the Notifications