ನಾಗರಬಾವಿಯ ಚಂದ್ರಗಿರಿ ಪಾರ್ಕ್ ಆ.24ರಂದು ಉದ್ಘಾಟನೆ
ಬೆಂಗಳೂರು, ಆ.22 : ಉದ್ಯಾನ ನಗರಿ ಎಂಬ ಖ್ಯಾತಿಯ ಬೆಂಗಳೂರು ನಗರಕ್ಕೆ ಮತ್ತೊಂದು ಉದ್ಯಾನವನ ಸೇರ್ಪಡೆಗೊಳ್ಳುತ್ತಿದೆ. ನಾಗರಬಾವಿ ಬಳಿ ಬಿಬಿಎಂಪಿ ನಿರ್ಮಿಸಿರುವ ಚಂದ್ರಗಿರಿ ಉದ್ಯಾನವನ ಆ.24ರಂದು ಲೋಕಾಪರ್ಣೆಯಾಗುತ್ತಿದೆ.
ಬಿಬಿಎಂಪಿ ನಗರ ಯೋಜನಾ ಸ್ಥಾಯಿಸಮಿತಿ ಅಧ್ಯಕ್ಷ ಮತ್ತು ನಾಗರಬಾವಿ ಪಾಲಿಕೆ ಸದಸ್ಯ ಕೆ. ಉಮೇಶ್ ಶೆಟ್ಟಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉದ್ಯಾನವನ ಉದ್ಘಾಟನೆ ಕುರಿತು ಮಾಹಿತಿ ನೀಡಿದ್ದಾರೆ. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಾಣ ಮಾಡಲಾಗಿದೆ ಎಂದು ಉಮೇಶ್ ಶೆಟ್ಟಿ ಅವರು ಮಾಹಿತಿ ನೀಡಿದರು.

ನಾಗರಬಾವಿ ಹಾಗೂ ಚಂದ್ರಾಬಡಾವಣೆ 1ನೇ ಹಂತದಲ್ಲಿದ್ದ ಸುಮಾರು ಎರಡೂವರೆ ಎಕರೆ ಖಾಲಿ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ಉದ್ಯಾನದಲ್ಲಿ ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಆಟದ ಸೌಲಭ್ಯ, ಉದ್ಯಾನದ ಮಧ್ಯಭಾಗದಲ್ಲಿ ಯೋಗ ಚಾವಡಿ ಹಾಗೂ ಸಾರ್ವಜನಿಕರ ಭದ್ರತೆಗೆ ಪೊಲೀಸ್ ಚೌಕಿ ಹಾಗೂ 25 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಉದ್ಯಾನವನದಲ್ಲಿ ಕರಾಟೆ ಕಿಂಗ್ ದಿ.ಶಂಕರನಾಗ್ ಹೆಸರಿನಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಆಗಸ್ಟ್ 24ರ ಭಾನುವಾರದಂದು ಉದ್ಯಾನವನ ಹಾಗೂ ಪಾಲಿಕೆ ಸೌಧವನ್ನು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಅನಂತಕುಮಾರ್ ಉದ್ಘಾಟಿಸಲಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಯಾನವನದ ಜತೆಗೆ 1,300 ಚದರಡಿ ವಿಸ್ತೀರ್ಣದಲ್ಲಿ ಬಹುಪಯೋಗಿ ಪಾಲಿಕೆ ಸೌಧವನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡಿ ವಾರ್ಡ್ ಕಚೇರಿ, ಕಂದಾಯ ಕಚೇರಿ, ಬೆಂಗಳೂರು ಒನ್ ಕೇಂದ್ರ, ಆರೋಗ್ಯ ಕೇಂದ್ರ, ಮಲ್ಟಿ ಜಿಮ್, ಏರೋಬಿಕ್ ಹಾಗೂ ಗ್ರಂಥಾಲಯ ಸೌಲಭ್ಯವಿದ್ದು, ಆರು ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಉಮೇಶ್ ಶೆಟ್ಟಿ ಹೇಳಿದ್ದಾರೆ.












Click it and Unblock the Notifications