ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ: ಕಾಂಗ್ರೆಸ್‌ನಿಂದ ಮೀಸಲಾತಿಗೆ ಆಕ್ಷೇಪ, ಮತ್ತೊಂದೆಡೆ ವಾರ್ಡ್‌ಗಳಲ್ಲಿ ಸಿದ್ಧತೆ

|
Google Oneindia Kannada News

ಬೆಂಗಳೂರು, ಆ.8: ಬಿಬಿಎಂಪಿ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಪ್ರಕಟಿಸುತ್ತಿದ್ದಂತೆಯೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ನಲ್ಲಿ ಚುನಾವಣೆ ತಯಾರಿ ಆರಂಭವಾಗಿದೆ. ಪ್ರಮುಖವಾಗಿ ಬೆಂಗಳೂರಿನ ಆಡಳಿತವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಪಕ್ಷದ ಪ್ರಮುಖ ನಾಯಕರು ಈಗಾಗಲೇ ವಾರ್ಡ್‌ಗಳತ್ತ ಬೀಡು ಬಿಟ್ಟಿದ್ದಾರೆ.

ವಾರ್ಡ್‌ವಾರು ವಾರು ಮೀಸಲಾತಿ ಬಗ್ಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್, ಪಕ್ಷದ ಪ್ರಮುಖ ನಾಯಕರಿಗೆ ಸ್ಪರ್ಧಿಸುವ ಅವಕಾಶವನ್ನು ತಪ್ಪಿಸಲು ಬೇಕಾಬಿಟ್ಟಿಯಾಗಿ ವಾರ್ಡ್ ಮೀಸಲಾತಿ ಪ್ರಕಟಿಸಿದೆ. ಈಬಗ್ಗೆ ನ್ಯಾಯಾಲಯದ ಮೊರೆ ಹೋಗಲೂ ಸಹ ನಿರ್ಧಾರ ಮಾಡಿದೆ. ಇದರ ಮಧ್ಯೆಯೇ ಚುನಾವಣೆ ಘೋಷಣೆಯಾದರೆ ಎಂಬ ಆತಂಕದಲ್ಲಿ ವಾರ್ಡ್‌ಗಳಲ್ಲಿ ಸಭೆಗಳನ್ನು ಸಹ ಏರ್ಪಾಡು ಮಾಡುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಬೆಂಗಳೂರು ದಕ್ಷಿಣ ಭಾಗದ ಕೋಣನಕುಟಂಟೆ, ಹನುಮಂತನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರೊಂದಿಗೆ ಸಭೆಗಳನ್ನು ಮಾಡಿದರು. ಕಾರ್ಯಕರ್ತರನ್ನು ಭೇಟಿ ಮಾಡಿ ಹುರಿದುಂಬಿಸುವ ಕೆಲಸ ಮಾಡಿದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ

ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ

ಈ ಸಂದರ್ಭದಲ್ಲಿ ಮಾತನಾಡಿದ ಅವರು "ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದರ ಅಂಗವಾಗಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದೇನೆ," ಎಂದು ಹೇಳಿದರು.

ಬೆಂಗಳೂರಿನಲ್ಲಿ ನಾವು ಸಮೀಕ್ಷೆ ಮಾಡಿದ್ದು ಜನ ದೊಡ್ಡ ಬದಲಾವಣೆಯನ್ನು ಬಯಸಿದ್ದಾರೆ. ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಅವರು ಇಚ್ಛಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪಾಲಿಕೆ ಚುನಾವಣೆಗೆ ಸಿದ್ಧವಾಗಿದ್ದು, ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ' ಅವರು ಏನಾದರೂ ಮಾಡಿಕೊಳ್ಳಲಿ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಿದ್ದರೆ ತಕ್ಷಣವೇ ಚುನಾವಣೆ ನಡೆಸುತ್ತಿದ್ದರು. ಈಗ ಕಾಲಹರಣ ಮಾಡಿದ್ದಾರೆ. ಚುನಾವಣೆ ನಡೆಸಲು ಅವರಿಗೆ ಸೋಲಿನ ಭಯ ಇದೆ. ನಮ್ಮ ಸಮೀಕ್ಷೆ ಪ್ರಕಾರ ಜನ ನಮ್ಮ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ ' ಎಂದು ತಿಳಿಸಿದರು.

ಮೀಸಲಾತಿ ಪ್ರಕಟಿಸುವುದರಲ್ಲಿ ಸರ್ಕಾರ ತಪ್ಪು ಮಾಡಿದೆ

ಮೀಸಲಾತಿ ಪ್ರಕಟಿಸುವುದರಲ್ಲಿ ಸರ್ಕಾರ ತಪ್ಪು ಮಾಡಿದೆ

ಸರ್ಕಾರ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿಯಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಇದರ ವಿರುದ್ಧ ನಮ್ಮ ಪಕ್ಷದ ನಾಯಕರು ಪ್ರತಿಭಟಿಸಿ, ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಮಾಡಿದ್ದು ತಪ್ಪು ಎಂದು ಹೇಳಬೇಕಾಗಿರುವುದು ನಮ್ಮ ಕರ್ತವ್ಯ.

ಹಿಂದುಳಿದವರು, ಪರಿಶಿಷ್ಟರು, ಮಹಿಳೆಯರಿಗೆ ನೀಡಬೇಕಾದ ಮೀಸಲಾತಿಯನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಬೊಮ್ಮನಹಳ್ಳಿ ಕ್ಷೇತ್ರದ 14 ವಾರ್ಡ್ ಗಳ ಪೈಕಿ 9 ವಾರ್ಡ್ ಗಳಿಗೆ ಮಹಿಳಾ ಮೀಸಲಾತಿ ನೀಡಿದ್ದಾರೆ. ಜಯನಗರದಲ್ಲಿ ಒಂಬತ್ತಕ್ಕೆ ಎಂಟು ವಾರ್ಡ್, ಬಿಟಿಎಂ ಲೇಔಟ್ ನಲ್ಲಿ 8 ವಾರ್ಡ್ ಹಾಗೂ ಗಾಂಧಿ ನಗರದಲ್ಲಿ 7 ಕ್ಕೆ 7 ವಾರ್ಡ್ ಗಳಲ್ಲಿ, ಚಾಮರಾಜಪೇಟೆಯ 6 ವಾರ್ಡ್ ಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಒಟ್ಟು 93 ವಾರ್ಡ್ ಗಳ ಪೈಕಿ 76 ಕಡೆ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಇದು ನ್ಯಾಯವೋ, ಅನ್ಯಾಯವೋ ನೀವೇ ತೀರ್ಮಾನಿಸಿ ಎಂದು ಹೇಳಿದರು.

' ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಅದರಲ್ಲಿ ಒಂದು ಆಕ್ಷೇಪಣೆಗೂ ಸರ್ಕಾರ ಸ್ಪಂದಿಸಿಲ್ಲ. ಯಾರ ಅಭಿಪ್ರಾಯವನ್ನೂ ಆಲಿಸದೆ ಸರ್ಕಾರ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿದೆ. ಬಿಜೆಪಿ ಶಾಸಕರು, ಸಂಸದರು ಸಂಘ ಪರಿವಾರದ ಕಚೇರಿಗಳಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಇದು ಅನ್ಯಾಯ ಅಲ್ಲವೇ? ಆಕ್ಷೇಪಗಳನ್ನು ಕೇಳುವ ಸೌಜನ್ಯ ಬೇಡವೇ?' ಎಂದು ಪ್ರಶ್ನಿಸಿದರು.

ನಾವು ಮಹಿಳೆಯರಿಗೆ ಮೀಸಲಾತಿ ವಿರೋಧಿಸುವುದಿಲ್ಲ. ಅವರಿಗೆ ರಾಜಕೀಯ ಶಕ್ತಿ ನೀಡಬೇಕೆಂಬುದು ನಮ್ಮ ಉದ್ದೇಶ. ಆದರೆ ಅವಕಾಶವನ್ನು ಸಮಾನವಾಗಿ ಹಂಚಬೇಕು. ಆದರೆ ಮೀಸಲಾತಿಯನ್ನು ಒಂದು ಕಡೆಗೆ ಕೇಂದ್ರೀಕರಿಸಿರುವುದು ಬಹಳ ಅನ್ಯಾಯ.

ಈ ಬಗ್ಗೆ ಹೋರಾಟ ಮುಂದುವರಿಸಿ, ಅಕ್ಷೇಪ ಸಲ್ಲಿಸಿ ಎಂದು ನಾವು ತಿಳಿಸಿದ್ದೇವೆ. ಮತದಾರರ ಪಟ್ಟಿಯಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಮತದಾರರನ್ನು ತೆಗೆದುಹಾಕಲಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಪಟ್ಟಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಪ್ರತ್ಯೇಕ ಸಭೆ ಮಾಡುತ್ತೇವೆ.

ಈಗಿನ ರಾಷ್ಟ್ರಪತಿಯೂ ಸ್ಥಳೀಯ ಸಂಸ್ಥೆಗಳಿಂದಲೇ ಬಂದವರು

ಈಗಿನ ರಾಷ್ಟ್ರಪತಿಯೂ ಸ್ಥಳೀಯ ಸಂಸ್ಥೆಗಳಿಂದಲೇ ಬಂದವರು

ನೆಹರು ಅವರು ಕೂಡ ಅಲಹಾಬಾದ್ ಪಾಲಿಕೆ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಪಾಲಿಕೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ವಿಲಾಸ್ ರಾವ್ ದೇಶ್ ಮುಖ್ ಕೂಡ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಬಿ.ಡಿ ಜತ್ತಿ ಅವರೂ ಕೂಡ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಈಗಿನ ರಾಷ್ಟ್ರಪತಿಗಳು ಕೂಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಭವಿಷ್ಯದಲ್ಲಿ ಶಾಸಕರಾಗುವವರಿಗೆ ಇದು ಬಹುಮುಖ್ಯ ಚುನಾವಣೆ ಎಂದು ಹೇಳಿದರು.

ಒಂದು ಕಾಲದಲ್ಲಿ ಬಸವನಗುಡಿ, ರಾಜಾಜಿನಗರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಎಸ್.ಎಂ. ಕೃಷ್ಣ ಅವರ ಸರ್ಕಾರದ ನಂತರ ನಮ್ಮ ಪಕ್ಷದವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಂತರ ಶಾಸಕರಾದ ಇತಿಹಾಸ ಇದೆ.

ಸ್ವಾತಂತ್ರ್ಯ ನಡಿಗೆಗೆ 29,000 ಮಂದಿ ನೋಂದಣಿ

ಸ್ವಾತಂತ್ರ್ಯ ನಡಿಗೆಗೆ 29,000 ಮಂದಿ ನೋಂದಣಿ

75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ನಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಆ. 15 ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದು ರಾಜಕೀಯೇತರ ಕಾರ್ಯಕ್ರಮ. ಇದರಲ್ಲಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ನೌಕರರು, ಕಲಾವಿದರು, ಬೇರೆ ಬೇರೆ ಕ್ಷೇತ್ರಗಳ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.

ಈಗಾಗಲೇ ಸುಮಾರು 29,000 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ರೈಲ್ವೇ ಸೇವೆ ಹಾಗೂ ಮೆಟ್ರೋ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಆದಷ್ಟು ವಾಹನ ಬಳಕೆ ಕಡಿಮೆ ಮಾಡಬೇಕು. ಆಗಸ್ಟ್ 15 ರಂದು ಮೆಟ್ರೋ ಪ್ರಯಾಣಿಕರಿಗೆ ಶೇ.50ರಷ್ಟು ವಿನಾಯಿತಿ ನೀಡಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇದು ಈ ದೇಶದ ಸ್ವಾತಂತ್ರ್ಯದ ಹಬ್ಬವಾಗಿದೆ. ಇದನ್ನು ಸಂಭ್ರಮದಿಂದ ಆಚರಿಸಬೇಕು. ಈ ಅವಕಾಶ ನಿಮಗೆ ಮತ್ತೆ ಸಿಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ಸ್ನೇಹಿತರು ಮನೆಮನೆಗೂ ರಾಷ್ಟ್ರಧ್ವಜವನ್ನು 25 ರೂಪಾಯಿ ನಿಗದಿ ಮಾಡಿದ್ದಾರೆ. ಸರ್ಕಾರ ಉಚಿತವಾಗಿ ರಾಷ್ಟ್ರಧ್ವಜ ನೀಡಬಹುದಿತ್ತು. ನೋಂದಣಿ ಮಾಡಿಕೊಂಡವರಿಗೆ ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಉಚಿತವಾಗಿ ನೀಡುತ್ತೇವೆ. ಅನೇಕರು ಸ್ತಬ್ಧ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಕಲಾವಿದರೂ ತಮ್ಮ ಪ್ರತಿಭೆ ಪ್ರದರ್ಶಿಸಬಹುದು. ಇದರಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು.

English summary
Government announced BBMP ward-wise reservation, it is almost certain that the election will be held, and the preparations for the election have started in the Congress. Major party leaders have already camped in the wards to take over the governance of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X