3 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ : ಯಾರು, ಏನು ಹೇಳಿದರು?
ಬೆಂಗಳೂರು, ಮೇ 6 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲಾವಕಾಶ ನೀಡುವಂತೆ ಕರ್ನಾಟಕ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ನೀಡಿದ ಕೋರ್ಟ್ ಮೊದಲು 3 ತಿಂಗಳೊಳಗೆ ಚುನಾವಣೆ ನಡೆಸಿ, ನಂತರ ಬಿಬಿಎಂಪಿ ವಿಭಜನೆ ಮಾಡಿ ಎಂದು ಆದೇಶ ನೀಡಿದೆ. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ : ಸುಪ್ರೀಂ]
ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಮಂಗಳವಾರ ನೀಡಿರುವ ತೀರ್ಪಿನಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ. ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆ. ಇದರಿಂದ ನಿಮಗೇನು ತೊಂದರೆ ಎಂದು ಸರ್ಕಾರಕ್ಕೆ ಮುಖ್ಯನ್ಯಾಯಮೂರ್ತಿಗಳು ವಿಚಾರಣೆ ವೇಳೆ ಪ್ರಶ್ನೆ ಮಾಡಿದ್ದಾರೆ. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ಸುಪ್ರೀಂಕೋರ್ಟ್ ಆದೇಶವನ್ನು ಪ್ರತಿಪಕ್ಷ ಬಿಜೆಪಿ ಸ್ವಾಗತಿಸಿದ್ದು, ಇದು ಬೆಂಗಳೂರಿನ ಜನರ ಗೆಲುವು ಎಂದು ಹೇಳಿದೆ. ಕೋರ್ಟ್ ಆದೇಶದ ಪ್ರತಿ ತಲುಪಿದ ನಂತರ ಪರಿಶೀಲಿಸಿ ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಾಲಿಕೆ ಚುನಾವಣೆ ಯಾರು, ಏನು ಹೇಳಿದರು?

ಪಂಚಾಯಿತಿ ಚುನಾವಣೆಗಾಗಿ ಕಾಲಾವಕಾಶ ಬೇಕು
'ಮೂರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುತ್ತಿರುವುದರಿಂದ ಕಾಲಾವಕಾಶ ಬೇಕಾಗಿದೆ. ಚುನಾವಣೆ ನಂತರ ವಿಭಜನೆ ಬಗ್ಗೆ ಗಮನಹರಿಸಲಾಗುತ್ತದೆ' ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ತೀರ್ಪಿನ ಪ್ರತಿ ಬಂದ ನಂತೆ ಮುಂದಿನ ತೀರ್ಮಾನ
'ಬಿಬಿಎಂಪಿ ಚುನಾವಣೆಯನ್ನು ಮೂರು ತಿಂಗಳೊಳಗೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರತಿ ತಲುಪಿದ ನಂತರ ಪರಿಶೀಲಿಸಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಅನಂತ ಕುಮಾರ್, 'ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಿದೆ. ಚುನಾವಣೆ ನಡೆಸುವಂತೆ ಕೋರಿ ಕಾನೂನು ಹಾಗೂ ಸಾರ್ವಜನಿಕರು ಕೈಗೊಂಡ ಹೋರಾಟಕ್ಕೆ ಜಯಸಿಕ್ಕಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರಕ್ಕೆ ಮುಖಭಂಗವಾಗಿದೆ
'ವಾಮಮಾರ್ಗದಿಂದ ಚುನಾವಣೆ ಮುಂದೂಡುವ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ಮುಖಭಂಗವಾಗಿದೆ. ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕದೆ ಇನ್ನಾದರೂ ಸರ್ಕಾರ ಚುನಾವಣೆ ನಡೆಸಲಿ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇವೆ
'ಸುಪ್ರೀಂಕೋರ್ಟ್ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವ ಕುರಿತು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು' ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.












Click it and Unblock the Notifications