'ಮರು ಮತದಾನ ಇಲ್ಲ, ಮತದಾನ ಪ್ರಮಾಣ ತೃಪ್ತಿ ತಂದಿಲ್ಲ'
ಬೆಂಗಳೂರು, ಆಗಸ್ಟ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗಾಗಿ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೆಲ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಒಟ್ಟಾರೆಯಾಗಿ ಪ್ರಕ್ರಿಯೆ ಯಶಸ್ವಿಯಾಗಿದೆ. ಯಾವುದೇ ಮತಗಟ್ಟೆಯಲ್ಲೂ ಮರು ಮತದಾನ ನಡೆಸುವುದಿಲ್ಲ, ಆಗಸ್ಟ್ 25ರಂದು ನಿಗದಿಯಂತೆ ಮತಎಣಿಕೆ ನಡೆಸಲಾಗುವುದು ಎಂದು ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಅವರು ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ಒಟ್ಟಾರೆ ಶೇ.49.31ರಷ್ಟು ಮತದಾನವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇ.5.27ರಷ್ಟು ಹೆಚ್ಚಳವಾಗಿದೆ. ಚುನಾವಣೆ ನಡೆದ 197 ವಾರ್ಡ್‌ಗಳಲ್ಲಿ 73,28,578 ಮತದಾರರ ಪೈಕಿ 36,13,831 ಮತದಾರರು ಈ ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು. [ವಿಜಯವಾಣಿ- ಈಟಿವಿ ಸಮೀಕ್ಷೆ: ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!]
ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಚುನಾವಣಾ ಆಯೋಗ, ಬಿಬಿಎಂಪಿ, ಶಾಲಾ-ಕಾಲೇಜುಗಳ ಮೂಲಕ ಮತದಾನದ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗದಿರುವುದರ ಬಗ್ಗೆ ಬೇಸರವಾಗಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಬಿಎಂಪಿ ಆಯುಕ್ತ ಕುಮಾರ್ ನಾಯರ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಳವಾಗಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ:
* ವಾರ್ಡ್ ನಂ.85 ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ಅತಿ ಕಡಿಮೆ ಅಂದರೆ ಶೇ.37.23ರಷ್ಟು ಮತದಾನವಾಗಿದೆ. [ಮತದಾನ ಪ್ರಮಾಣ ಇಳಿಕೆ ಕಾರಣ ಬಿಚ್ಚಿಟ್ಟ ಎಚ್ಡಿಕೆ]
* ಸ್ವಯಂ ಸೇವಾ ಸಂಸ್ಥೆಗಳು ಚುನಾವಣಾ ಆಯೋಗ, ಬಿಬಿಎಂಪಿ, ಶಾಲಾ-ಕಾಲೇಜುಗಳ ಮೂಲಕ ಮತದಾನದ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗಿಲ್ಲ.
* ಎಲ್ಲಾ ವಾರ್ಡ್ ಗಳಲ್ಲೂ ಶಾಂತಿಯುತವಾಗಿ ಮತದಾನ ನಡೆದಿದ್ದು, ಎಲ್ಲಿಯೂ ಕೂಡ ಮರುಮತದಾನದ ಅಗತ್ಯ ಕಂಡುಬಂದಿಲ್ಲ
* ಆ.25 (ಮಂಗಳವಾರ) ರಂದು ಬೆಳಗ್ಗೆ 8 ಗಂಟೆಯಿಂದ ನಿಗದಿಯಂತೆ ಮತ ಎಣಿಕೆ ನಡೆಯಲಿದೆ.
* ವಿಧಾನಸಭಾ ಕ್ಷೇತ್ರವಾರು 27 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ.
* ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 19 ಸುತ್ತು ಮತ ಎಣಿಕೆ ನಡೆಯಲಿದೆ
* ಮತ ಎಣಿಕೆಗೆ 3,180 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಬ್ಬ ಚುನಾವಣಾಧಿಕಾರಿಗೆ 1 ಆರ್‌ಒ ಟೇಬಲ್ ಸೇರಿದಂತೆ 14 ಟೇಬಲ್‌ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
* ಮತ ಎಣಿಕೆ ಕಾರ್ಯದಲ್ಲಿ 304 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಮತ ಎಣಿಕೆ ಕೇಂದ್ರದ ಒಂದು ಕಿಮೀ ವ್ಯಾಪ್ತಿಯ ಹೊರಗೂ ಪಾನಮುಕ್ತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
* ಆಗಸ್ಟ್ 25ರಂದು ಬೆಳಗ್ಗೆ 6ರಿಂದ 8ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications