ಈದ್ಗಾ ಮೈದಾನ ವಿವಾದ: ಶಾಸಕ ಜಮೀರ್ ದಿಢೀರ್ ಭೇಟಿ ನೀಡಿ ಪರಿಶೀಲನೆ
ಬೆಂಗಳೂರು, ಜೂನ್ 21: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗಿದೆ. ಈದ್ಗಾ ಮೈದಾನ ,ಆಟದ ಮೈದಾನ, ಎಮ್ಮೆ ಮೈದಾನ ಅಂತೆಲ್ಲಾ ಕರೆಯುವ ಮೈದಾನ ಬಿಬಿಎಂಪಿಯದ್ದೋ ವಕ್ಫ್ ಮಂಡಳಿಯದ್ದೋ ಎಂಬ ವಿವಾದ ಎದ್ದಿದೆ. ಇದೀಗ ಈದ್ಗಾ ಮೈದಾನಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ.
ಜೂನ್ 21 ಅಂತರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಮೈದಾನದಲ್ಲಿ ಯೋಗದಿನಾಚರಣೆಯನ್ನು ಆಚರಿಸಲು ಹಿಂದೂ ಸಂಘಟನಗಳು ಮನವಿಯಮ್ನು ಮಾಡಿದ್ದರು. ಬಿಬಿಎಂಪಿ ಹಿಂದೂ ಸಂಘಟನೆಗಳ ಯೋಗ ದಿನಾಚರಣೆಯ ಮನವಿಯನ್ನು ತಿರಸ್ಕರಿಸಿತ್ತು. ವಕ್ಫ್ ಮಂಡಳಿ ಮೈದಾನ ತನಗೆ ಸೇರಿದ್ದು ಎಂದು ದಾಖಲೆಗಳನ್ನು ನೀಡಿದೆ. ದಾಖಲೆಯನ್ನು ಪರಿಶೀಲನೆ ನಡೆಸಲು ಕೆಲವು ದಿನ ಸಮಯಾವಕಾಶ ಬೇಕಿರುವುದರಿಂದ ಬಿಬಿಎಂಪಿ ಹಿಂದೂ ಸಂಘಟನೆಯ ಮನವಿಯನ್ನು ತಿರಸ್ಕರಿಸಿತ್ತು.
ಈದ್ಗಾ ಮೈದಾನದ ವಿವಾದ ಹೆಚ್ಚಾದ ನಂತರ ಪೊಲೀಸರು ನಿರಂತರವಾಗಿ ಈದ್ಗಾ ಮೈದಾನದಲ್ಲಿ ಕಾವಲನ್ನು ಕಾಯುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಈಗಾಗಲೇ ಮೈದಾನದ ಸುತ್ತಲೂ ಸಿಸಿಟಿವಿಯನ್ನು ಸಹ ಅಳವಡಿಸಲಾಗಿದೆ. ಚಾಮರಾಜಪೇಟೆಯ ಶಾಸಕರಾಗಿರುವ ಬಿ.ಝಡ್. ಜಮೀರ್ ಅಹಮದ್ ಖಾನ್ ಈದ್ಗಾ ಮೈದಾನಕ್ಕೆ ತೆರಳಿ ವಾಸ್ತವ ಸ್ಥಿತಿಗತಿಯನ್ನು ಪರಿಶೀಲನೆಯನ್ನು ನಡೆಸಿದ್ದಾರೆ.

ವಕ್ಫ್ ಮಂಡಳಿಯಿಂದ ದಾಖಲೆ ರವಾನೆ
ಬಿಬಿಎಂಪಿ ಈದ್ಗಾ ಮೈದಾನ ತನ್ನ ಸುಪರ್ಧಿಯಲ್ಲಿದ್ದು ತನಗೆ ಸೇರಿದ್ದು. ಮುಸ್ಲಿಂರಿಗೆ ವರ್ಷದಲ್ಲಿ ಎರಡು ಸಲ ನಮಾಜ್ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ಹೇಳಿತ್ತು. ಇದಕ್ಕೆ ಪ್ರತಿಯಾಗಿ ವಕ್ಫ್ ಮಂಡಳಿ ಈ ಆಟದ ಮೈದಾನ ತನಗೆ ಸೇರಿದ್ದು. ಸುಪ್ರೀಂ ಕೋರ್ಟ್ ಸಹ ತಮ್ಮ ಪರವಾಗಿ ತೀರ್ಪನ್ನು ನೀಡಿದೆ ಎಂದಿದ್ದು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ವಕ್ಫ್ ಮಂಡಳಿಗೆ ನೊಟೀಸ್ ನೀಡಿ ತಮ್ಮ ಬಳಿಯಲ್ಲಿರುವ ಮೈದಾನದ ದಾಖಲೆ ಪತ್ರವನ್ನು ಒದಗಿಸುವಂತೆ ಕೇಳಿತ್ತು. ವಕ್ಫ್ ಮಂಡಳಿ ಸಹ ದಾಖಲೆ ಪತ್ರವನ್ನು ನೀಡಿದೆ. ಬಿಬಿಎಂಪಿ ವಕ್ಫ್ ಮಂಡಳಿಯ ದಾಖಲೆ ಪತ್ರವನ್ನು ಕಾನೂನು ವಿಭಾಗಕ್ಕೆ ಕಳುಹಿಸಿ ಸಲಹೆಯನ್ನು ಕೇಳಿದೆ.

ಕೋರ್ಟ್ ಮೊರೆ ಹೋಗಲಿರುವ ಹಿಂದೂ ಸಂಘಟನೆ
ಯೋಗ ದಿನಾಚರಣೆಗೆೆ ಅನುಮತಿಯನ್ನು ನೀಡಲು ಬಿಬಿಎಂಪಿ ನಿರಾಕರಿಸಿದೆ. ಹಿಂದೂ ಸಂಘಟನೆಗಳು ಬಿಬಿಎಂಪಿಯನ್ನು ಅನುಮತಿ ಕೇಳಿತ್ತು. ಇದೀಗ ಬಿಬಿಎಂಪಿ ಅನುಮತಿಯನ್ನು ನೀರಾಕರಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹಿಂದೂ ಸಂಘಟನೆಗಳು ತಿಳಿಸಿವೆ. ಸ್ವಾತಂತ್ರ ದಿನಾಚರಣೆ , ಗಣೇಶ ಹಬ್ಬ ಸೇರಿದಂತೆ ವಿವಿಧ ಸಾರ್ವಜನಿಕ ಹಬ್ಬಗಳನ್ನು ಆಚರಿಸಲು ಹಿಂದೂ ಸಂಘಟನೆ ಮುಂದಾಗಿದೆ. ಆದರೆ ಬಿಬಿಎಂಪಿ ಮತ್ತು ನ್ಯಾಯಾಲಯದ ಅನುಮತಿಯನ್ನು ಪಡೆದು ಕಾರ್ಯಕ್ರಮವನ್ನು ನಡೆಸಬೇಕಿದೆ.

ಮಕ್ಕಳು ಆಟಕ್ಕಾಗಿ ಬಳಕೆಯಾಗ್ತಿರುವ ಮೈದಾನ
ಈದ್ಗಾ ಮೈದಾನ ಬಿಬಿಎಂಪಿಯದ್ದೋ ಅಥವಾ ವಕ್ಫ್ ಮಂಡಲಿಯದ್ದೋ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಬಿಬಿಎಂಪಿ ಮತ್ತು ವಕ್ಫ್ ಮಂಡಲಿ ಮೈದಾನವನ್ನು ತಮ್ಮದೆಂದು ವಾದಿಸುತ್ತಿವೆ. ಈ ಮೈದಾನದಲ್ಲಿ ವಾರ್ಷಿಕ ಎರಡು ಸಲ ಮುಸಲ್ಮಾನರು ಪ್ರಾರ್ಥನೆಯನ್ನು ಮಾಡುವುದಕ್ಕೆ ಬಳಸುತ್ತಾರೆ. ಇದನ್ನು ಹೊರತು ಪಡಿಸಿ ಮಕ್ಕಳು ಆಟವಾಡುವುದಕ್ಕೆ ಮೈದಾನ ಬಳಕೆಯಾಗುತ್ತಿದೆ. ನಿಕರವಾಗಿ ಮೈದಾನ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಸ್ಪಷ್ಟನೆಯಂತು ಸಿಕ್ಕಿಲ್ಲ.

ಮೈದಾನ ಮತ್ತು ಪೊಲೀಸ್ ಭದ್ರತೆ ಪರಿಶೀಲನೆ
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಶಾಸಕ ಬಿ.ಝಡ್. ಜಮೀರ್ ಅಹಮದ್ ಖಾನ್ ನಾಲ್ಕನೇ ಸಲ ಪ್ರತಿನಿಧಿಸುತ್ತಿದ್ದಾರೆ. ವಾರ್ಡ್ ನಂಬರ್ 140 ವ್ಯಾಪ್ತಿಯಲ್ಲಿ ಈದ್ಗಾ ಮೈದಾನ ಬರಲಿದೆ. ಮಾಜಿ ಸಚಿವ ಹಾಲಿ ಶಾಸಕ ಜಮೀರ್ ಅಹಮದ್ ಖಾನ್‌ರವರು ವಿವಾದಿತ ಪ್ರದೇಶಕ್ಕೆ ದಿಢೀರ್ ಭೇಟಿ ಕೊಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಶಾಸಕ ಜಮೀರ್ ಭದ್ರತೆ ಬಗ್ಗೆ ಪೊಲೀಸ್ ಅಧಿಕಾರಿಗಳಿಂದಲೂ ಮಾಹಿತಿಯನ್ನು ಪಡೆದಿದ್ದಾರೆ.












Click it and Unblock the Notifications