Final E-Khata: ಆಸ್ತಿ ಮಾಲೀಕರ ಮನೆ ಬಾಗಿಲಿಗೇ ಬರಲಿದೆ ಅಂತಿಮ ಇ-ಖಾತೆ, ಯಾವಾಗ? ಇಲ್ಲಿದೆ ಅಪ್ಡೇಟ್
ಬೆಂಗಳೂರು, ಜೂನ್ 25: ಬೆಂಗಳೂರಿನಲ್ಲಿ ಆಸ್ತಿ ಮಾಲೀಕರಿಗೆ ಇ-ಖಾತೆ ನೀಡಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ. ಈ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಮನೆ ಮನೆಗೆ ಇ-ಖಾತಾ ವಿತರಣೆ ಮಾಡಲಾಗುವುದು. 25ಲಕ್ಷ ಕರಡು ಇ-ಖಾತಾಗಳು ಆನ್‌ಲೈನ್‌ನಲ್ಲಿ ಲಭ್ಯ ಇರುವ ಬಗ್ಗೆ ಈಗಾಗಲೇ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
2025- 26 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜತೆ ಸಭೆ ಬಳಿಕ ಡಿಕೆ. ಶಿವಕುಮಾರ್ ಅವರು ಸುದ್ದಿಗಾರರಿಗೆ ಇ-ಖಾತೆ ವಿತರಣೆ, ಅಕ್ರಮ ಕಟ್ಟಡ ತಡೆ, ಬಿಬಿಎಂಪಿ ಚುನಾವಣೆ ಕುರಿತು ಅಪ್ಡೇಟ್ ಮಾಹಿತಿ ನೀಡಿದರು.

ಏಪ್ರಿಲ್‌ನಿಂದ ಮನೆ ಬಾಗಿಲಿಗೆ ಉಚಿತ ಅಂತಿಮ ಇ-ಖಾತಾ..
ಲಕ್ಷಾಂತರ ಆಸ್ತಿ ದಾಖಲೆಗಳು ಡಿಜಿಟಲೀಕರಣಗೊಂಡಿವೆ. ಇ-ಖಾತಾ ವಿತರಣೆಗೆ ಲಕ್ಷಾಂತರ ಅರ್ಜಿಗಳು ಬಂದಿವೆ. ನಾಗರಿಕರು ಸಹ ಇ-ಖಾತೆ ಪಡೆಯಲುವಲ್ಲು ಉತ್ಸುಕರಾಗಿದ್ದಾರೆ. ಸರ್ಕಾರ ಹೊಸ ಉದ್ದೇಶದಂತೆ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ.
ಮನೆ ಬಾಗಿಲಿನಿಂದ ಉಚಿತ ಅಂತಿಮ ಇ-ಖಾತಾ ನೀಡುವ ಕಾರ್ಯಕ್ರಮಕ್ಕೆ ಏಪ್ರಿಲ್ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಕಸ್ಮಾತ್ ತಪ್ಪಿಹೋಗಿದ್ದಲ್ಲಿ ಅಂತವರು ತಮ್ಮ ದಾಖಲೆಗಳನ್ನು ಮತ್ತೆ ನೀಡಬಹುದು. ಬೆಂಗಳೂರು ನಗರದ ಪ್ರತಿ ಕ್ಷೇತ್ರದ ಶಾಸಕರ ಬಳಿ ಮಾತನಾಡಿ, ಕ್ಷೇತ್ರವಾರು ಕಾರ್ಯಕ್ರಮ ನಡೆಸಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಅಕ್ರಮದಲ್ಲಿ ಅಧಿಕಾರಿಗಳು ಭಾಗಿ? ಅಮಾನತು ಮಾಡಿ
ಬೆಂಗಳೂರಿನಲ್ಲಿ ಮನೆ, ನಿವೇಶನ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅಂತಹವರನ್ನು ನನ್ನ ಗಮನಕ್ಕೆ ತರದೆಯೂ ಕೂಡಲೇ ಅಮಾನತು ಮಾಡಿ ಎಂದು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇತ್ತೀಚೆಗೆ ಅನೇಕ ದಂಡ ಶುಲ್ಕಗಳ ಮೊತ್ತವನ್ನು ಕೂಡ ಕಡಿಮೆ ಮಾಡಲಾಗಿದೆ. ನಗರದ ವ್ಯಾಪ್ತಿಯ ಎಲ್ಲಾ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಗುಂಪು & ಒಂಟಿ ಮನೆ ನಿರ್ಮಾಣ ಸಲಹೆ
ಮನೆ ನಿರ್ಮಾಣ ವಿಚಾರದಲ್ಲಿ ಶೇಕಡಾ 50 ರಷ್ಟು ಗುಂಪು ಮನೆಗಳು, ಶೇಕಡಾ 50 ರಷ್ಟು ಒಂಟಿ ಮನೆಗಳು ಮಾಡಬೇಕು ಎನ್ನುವ ಸಲಹೆಯನ್ನು ಸಚಿವರು/ಶಾಸಕರು ನೀಡಿದ್ದಾರೆ. ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು. ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದು ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರು ಇ-ಖಾತಾಗಾಗಿ ಸಲ್ಲಿಸುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ. ಇದರೊಂದಿಗೆ ನಾಗರಿಕರಿಗೆ ವಿನಂತಿ ಮಾಡಿಕೊಂಡಿದ್ದು,
ಇ-ಖಾತಾಗೆ ಅರ್ಜಿ ಸಲ್ಲಿಸಿ ಮತ್ತು ಕಾಯಿರಿ, ಬಿಬಿಎಂಪಿ ಕಛೇರಿಗಳಿಗೆ ಭೇಟಿ ನೀಡಬೇಡಿ ಎಂದು ಕೋರಲಾಗಿದೆ. ನಿಮ್ಮ ಅರ್ಜಿಯನ್ನು ಕೆಲವೇ ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಏನಾದರೂ ಸಮಸ್ಯೆ ಇದ್ದಲ್ಲಿ ತಾವು ಸಹಾಯವಾಣಿ 9480683695 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.












Click it and Unblock the Notifications